ಬೆಂಗಳೂರು, ನ. 26: ಶಿಕ್ಷಣ ದಾನ ಅಥವಾ ಭಿಕ್ಷೆಯಲ್ಲ, ಅದು ನಮ್ಮ ಮೂಲಭೂತ ಹಕ್ಕು. ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರದಿಂದ ಲಿಖಿತ ಭರವಸೆ ದೊರೆಯುವವರೆಗೆ ಧರಣಿ ಸ್ಥಳದಿಂದ ಕದಲುವುದಿಲ್ಲ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಎಚ್ಚರಿಸಿದರು.
ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಅನುಷ್ಠಾನ ಹಾಗೂ ಸರ್ಕಾರಿ ಶಾಲೆಗಳ ದತ್ತು ನೀತಿ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಆರಂಭಗೊಂಡ ಅಹೋರಾತ್ರಿ ಧರಣಿಯಲ್ಲಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ನಡೆಸುತ್ತಿರುವ ನಿರ್ಣಾಯಕ ಹೋರಾಟ ಇದಾಗಿದೆ ಎಂದರು.
60 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ
ರಾಜ್ಯದಲ್ಲಿ 60 ಸಾವಿರ ಶಿಕ್ಷಕ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 30 ಸಾವಿರ ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿವೆ. ಶೇ.38ರಷ್ಟು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಿಲ್ಲ. ಶೇ.23ರಷ್ಟು ಶಾಲೆಗಳಲ್ಲಿ ಕೊಠಡಿಗಳು ಹಾಗೂ ಶೇ.16ರಷ್ಟು ಶಾಲೆಗಳಲ್ಲಿ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ ಎಂದರು.
ಶೇ.40ರಷ್ಟು ಶಾಲೆಗಳಲ್ಲಿ ಆಟದ ಮೈದಾನ, ಶೇ.30ರಷ್ಟು ಶಾಲೆಗಳಲ್ಲಿ ತಡೆಗೋಡೆ ಹಾಗೂ ಶೇ.32ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿ 16 ವರ್ಷಗಳು ಕಳೆದರೂ ಸಮಗ್ರ ಅನುಷ್ಠಾನವಾಗಿಲ್ಲ ಎಂದು ದೂರಿದರು.
ಮುಂದಿನ ಬಜೆಟ್ನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಅನುಷ್ಠಾನಕ್ಕೆ ಅಗತ್ಯ ಅನುದಾನ ಮೀಸಲಿಡಬೇಕು. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ವಹಿಸುವುದಾದರೆ ವಿಧಾನಸೌಧವನ್ನೂ ಸರ್ಕಾರವನ್ನೂ ದತ್ತು ಕೊಟ್ಟುಬಿಡಿ. ಬೇರೆಯವರೇ ಆಡಳಿತ ನಡೆಸಲಿ ಎಂದು ವ್ಯಂಗ್ಯವಾಡಿದರು.
ಬಡವರ ಮಕ್ಕಳು ಭಿಕ್ಷುಕರಲ್ಲ. ಶಿಕ್ಷಣ ಅವರ ಸಾಂವಿಧಾನಿಕ ಹಕ್ಕು. ಸರ್ಕಾರ ಜನವಿರೋಧಿ ಕ್ರಮಗಳನ್ನು ಕೈಬಿಡದಿದ್ದರೆ ಮುಂದಿನ ಚುನಾವಣೆಯಲ್ಲಿ ಮತದಾನದ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.