ಗೋಕಾಕ, ನ. 27: ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಹಿರಿಯ ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ನಟಿ ಮಾಲತಿಶ್ರೀ ಮೈಸೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ನಗರದ ಮೃತ್ಯುಂಜಯ ಸಾಂಸ್ಕೃತಿಕ ಭವನದಲ್ಲಿ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಹೊಸಮಠದ ವಿರೂಪಾಕ್ಷ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗೋಕಾವಿ ನಾಡಿನ ಮಗಳೆಂದೇ ಗುರುತಿಸಿಕೊಂಡಿರುವ ಮಾಲತಿಶ್ರೀ ಅವರನ್ನು ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು.
ಶಾಸಕ ರಮೇಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ನಡೆದ ಸಭೆಯಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರು ವಹಿಸಿಕೊಂಡರು. ಶೀಘ್ರದಲ್ಲೇ ಮತ್ತೊಂದು ಸಭೆ ನಡೆಸಿ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ವಿರೂಪಾಕ್ಷ ಸ್ವಾಮೀಜಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಭಾರತಿ ಮದಬಾಂವಿ, ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ ಅಕ್ಕಿ, ಮಹಾಂತೇಶ ತಾವಂಶಿ, ಡಿ.ಎಂ. ದಳವಾಯಿ, ರಾಮಣ್ಣ ಹುಕ್ಕೇರಿ, ಶೌಕತ ಕಬ್ಬೂರ ಭಾಗವಹಿಸಿದ್ದರು. ಶಿಕ್ಷಕ ರವೀಂದ್ರ ಉಪ್ಪಾರ ನಿರೂಪಿಸಿದರು.