ಬೆಳಗಾವಿ, ನ. 27: ಸಮಾಜದಲ್ಲಿ ಸಮಾನತೆ, ಘನತೆ ಹಾಗೂ ಗೌರವಯುತ ಬದುಕಿನ ಹಕ್ಕುಗಳನ್ನು ಪ್ರತಿಪಾದಿಸಿ ಲಿಂಗತ್ವ ಅಲ್ಪಸಂಖ್ಯಾತರು ಗುರುವಾರ ನಗರದಲ್ಲಿ ‘ಸ್ವಾಭಿಮಾನದ ನಡಿಗೆ’ ನಡೆಸಿದರು.
ಲಿಂಗತ್ವ ಅಲ್ಪಸಂಖ್ಯಾತರ ವೇದಿಕೆಯ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಮುದಾಯದ ಸದಸ್ಯರು ರಾಣಿ ಚನ್ನಮ್ಮ ವೃತ್ತದ ಸಮೀಪದ ಕನ್ನಡ ಸಾಹಿತ್ಯ ಭವನದಲ್ಲಿ ಸಮಾವೇಶಗೊಂಡರು. ಸಮುದಾಯದ ಹೆಗ್ಗುರುತಾದ ಏಳು ವರ್ಣಗಳ ಧ್ವಜವನ್ನು ಹಿಡಿದು ಮೆರವಣಿಗೆ ನಡೆಸಿದ ಅವರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇಡಿಕೆಗಳ ಮನವಿ ಸಲ್ಲಿಸಿದರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಬಣ್ಣಬಣ್ಣದ ಬಲೂನುಗಳ ಕಮಾನುಗಳನ್ನು ಹೊತ್ತು ಸಾಗಿದ ಪ್ರತಿಭಟನಕಾರರು, ತಮ್ಮ ಬದುಕಿಗೂ ಅವಕಾಶದ ಬಾಗಿಲುಗಳು ತೆರೆಯಬೇಕು ಎಂಬ ಸಂದೇಶ ಸಾರಿದರು. ವಿವಿಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಮೊಳಗಿಸಿದರು. ಹಾಡು, ನೃತ್ಯ ಹಾಗೂ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಲಿಂಗತ್ವ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವ ಮನೋಭಾವ ಕೊನೆಗೊಳ್ಳಬೇಕು. ನಾವೂ ಮನುಷ್ಯರೇ. ನಮಗೂ ಸಮಾನ ಹಕ್ಕು, ಘನತೆ ಹಾಗೂ ಸ್ವಾಭಿಮಾನದಿಂದ ಬದುಕುವ ಅವಕಾಶ ಬೇಕು. ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಸೌಲಭ್ಯಗಳು ದೊರೆಯಬೇಕು. ಸರ್ಕಾರ ಘೋಷಿಸಿರುವ ಕಲ್ಯಾಣ ಯೋಜನೆಗಳು ಕೇವಲ ಕಾಗದಕ್ಕೆ ಸೀಮಿತವಾಗದೆ ಸಮುದಾಯದ ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಆಗ್ರಹಿಸಿದರು.
ಪ್ರತಿವರ್ಷ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸುತ್ತಿದ್ದೇವೆ. ಆದರೆ ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಸೌಲಭ್ಯಗಳ ವಿತರಣೆಯಲ್ಲಿಯೂ ತಾರತಮ್ಯ ನಡೆಯುತ್ತಿದ್ದು, ಪ್ರತಿನಿತ್ಯ ಅನ್ಯಾಯ ಎದುರಿಸುತ್ತಿದ್ದೇವೆ. ನಮ್ಮ ಸಮಸ್ಯೆಗಳನ್ನು ಸರ್ಕಾರ ಅರ್ಥಮಾಡಿಕೊಂಡು ವಿಶೇಷ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ದೌರ್ಜನ್ಯಕ್ಕೆ ಕೊನೆಯಾಗಲಿ
ದೇಶದ ವಿವಿಧೆಡೆ ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಹಲ್ಲೆ ಹಾಗೂ ಕೊಲೆಯಂತಹ ಘಟನೆಗಳು ನಡೆಯುತ್ತಲೇ ಇವೆ. ಉತ್ತಮ ಶಿಕ್ಷಣ ಮತ್ತು ಉದ್ಯೋಗ ದೊರೆತರೆ ನಾವೂ ಗೌರವಯುತವಾಗಿ ಬದುಕಬಹುದು. ಆದರೆ ಲಿಂಗತ್ವ ಅಲ್ಪಸಂಖ್ಯಾತರೆಂದು ತಿಳಿದ ತಕ್ಷಣ ಕುಟುಂಬದವರೇ ಮನೆಯಿಂದ ಹೊರದೂಡುತ್ತಾರೆ. ಸಮಾಜವೂ ತಿರಸ್ಕರಿಸುತ್ತದೆ. ಸರ್ಕಾರವೂ ನಮ್ಮ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಪರಿಣಾಮವಾಗಿ ಸಮುದಾಯದ ಕೆಲವರು ಅನಿವಾರ್ಯವಾಗಿ ಭಿಕ್ಷಾಟನೆ ಅಥವಾ ಲೈಂಗಿಕ ವೃತ್ತಿಯನ್ನು ಅವಲಂಬಿಸುವಂತಾಗಿದೆ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.