ಬೆಂಗಳೂರು, ನ. 27: ಸರ್ಕಾರಿ ಉದ್ಯೋಗದ ಕನಸು ಹೊತ್ತಿರುವ ರಾಜ್ಯದ ಯುವಜನರಿಗೆ ನೆರವಾಗಲು ಕರ್ನಾಟಕ ಸರ್ಕಾರ ‘ಮುಖ್ಯಮಂತ್ರಿಗಳ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ’ಯಡಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ತರಬೇತಿ ನೀಡುತ್ತಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ರೈತರ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ಅಭ್ಯರ್ಥಿಗಳು ಹಣಕಾಸಿನ ಸಮಸ್ಯೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಸುಮಾರು 90 ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡಲು 9 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಊರಿನಲ್ಲಿಯೇ ಇದ್ದುಕೊಂಡು ಅನುಕೂಲಕರ ಸಮಯದಲ್ಲಿ ತರಬೇತಿ ಪಡೆಯಬಹುದಾಗಿದೆ.
ಯಾವ ಪರೀಕ್ಷೆಗಳಿಗೆ ತರಬೇತಿ?
ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರ್ಸ್, ಸಹಾಯಕ ಪ್ರಾಧ್ಯಾಪಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಪೊಲೀಸ್ ಕಾನ್‌ಸ್ಟೇಬಲ್, ಗ್ರಾಮ ಆಡಳಿತಾಧಿಕಾರಿ, ಶಿಕ್ಷಕರ ನೇಮಕಾತಿ ಹಾಗೂ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗಳಿಗೆ ತರಬೇತಿ ಲಭ್ಯವಿದೆ.
ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ಆಸಕ್ತಿಗೆ ಅನುಗುಣವಾಗಿ ಗರಿಷ್ಠ 3 ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇಂಡಿಯಾ ಫಾರ್ ಐಎಎಸ್ ತರಬೇತಿ ಸಂಸ್ಥೆಯ ಮೂಲಕ 90 ದಿನಗಳ ಅವಧಿಯಲ್ಲಿ 360 ತರಗತಿಗಳನ್ನು ನಡೆಸಲಾಗುತ್ತದೆ. ನೇರ ಆನ್‌ಲೈನ್ ತರಗತಿಗಳು, ಮೊದಲೇ ಧ್ವನಿಮುದ್ರಿಸಲಾದ ಪಾಠಗಳು, ಅಧ್ಯಯನ ಸಾಮಗ್ರಿ, ಬಹು ಆಯ್ಕೆಯ ಪ್ರಶ್ನೆಗಳು, ಅಭ್ಯಾಸ ಪರೀಕ್ಷೆಗಳು ಹಾಗೂ ಪ್ರಶ್ನೆಪತ್ರಿಕೆಗಳ ಸೌಲಭ್ಯ ದೊರೆಯಲಿದೆ. ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ತರಬೇತಿ ಪಡೆಯಬಹುದಾಗಿದೆ.
ಇತಿಹಾಸ, ಭೂಗೋಳ, ಭಾರತದ ಆರ್ಥಿಕತೆ, ಸಂವಿಧಾನ, ವಿಜ್ಞಾನ, ಪರಿಸರ, ಪ್ರಚಲಿತ ವಿದ್ಯಮಾನಗಳು, ತಾರ್ಕಿಕ ಸಾಮರ್ಥ್ಯ, ಕನ್ನಡ ಹಾಗೂ ಇಂಗ್ಲಿಷ್ ಭಾಷಾ ಕೌಶಲ ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕದ ಖಾಯಂ ನಿವಾಸಿಗಳಾಗಿದ್ದು, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರುವ ಅರ್ಹ ಅಭ್ಯರ್ಥಿಗಳು ಸೇವಾ ಒನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರತಿಯನ್ನು ಮುಂದಿನ ಉಲ್ಲೇಖಕ್ಕಾಗಿ ಕಾಯ್ದಿರಿಸಿಕೊಳ್ಳಬೇಕು.
ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸುವಾಗ ಎದುರಾಗುವ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ 080-24410574 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.