ಹೊಸದಿಲ್ಲಿ, ನ. 27: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಮಸೂದೆಯು ಜನರ ಪ್ರಜಾಸತ್ತಾತ್ಮಕ ಮತ್ತು ರಾಜಕೀಯ ಅಧಿಕಾರವನ್ನು ಕಸಿದುಕೊಳ್ಳುವ ಬಿಜೆಪಿಯ ಪಿತೂರಿಯಾಗಿದೆ ಎಂದು ಶಿವಸೇನೆ (ಉದ್ಧವ ಠಾಕ್ರೆ ಬಣ) ಸಂಸದ ಸಂಜಯ ರಾವತ್ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ದೇಶಪ್ರೇಮಿ ಹಾಗೂ ಪ್ರಜಾಸತ್ತಾತ್ಮಕ ಪಕ್ಷಗಳೆಲ್ಲವೂ ಈ ಮಸೂದೆಯನ್ನು ವಿರೋಧಿಸಬೇಕು. ಇದನ್ನು ಬೆಂಬಲಿಸುವವರನ್ನು 21ನೇ ಶತಮಾನದ ಅತಿದೊಡ್ಡ ದೇಶದ್ರೋಹಿಗಳೆಂದು ಇತಿಹಾಸ ನೆನಪಿಸಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಇಂದು ಬಾಳಾಸಾಹೇಬ್ ಠಾಕ್ರೆ ನಮ್ಮೊಂದಿಗಿಲ್ಲ. ಶರದ್ ಪವಾರ್ ಅನಾರೋಗ್ಯದಿಂದಾಗಿ ಹೋರಾಟ ನಡೆಸುವ ಸ್ಥಿತಿಯಲ್ಲಿಲ್ಲ. ಇಲ್ಲದಿದ್ದರೆ ಇಂತಹ ರಾಷ್ಟ್ರವಿರೋಧಿ ಮಸೂದೆಯನ್ನು ಸಂಸತ್ತಿನ ಮುಂದೆ ತರುವ ಧೈರ್ಯವನ್ನು ಯಾರೂ ಮಾಡುತ್ತಿರಲಿಲ್ಲ ಎಂದಿದ್ದಾರೆ.
ಇತಿಹಾಸ ದ್ರೋಹಿಗಳ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ದ್ರೋಹಕ್ಕೆ ನೀಡುವ ಸಮರ್ಥನೆಗಳು ಕಾಲಕ್ರಮೇಣ ಮರೆಯಾಗುತ್ತವೆ ಎಂದಿರುವ ರಾವತ್, ತಮ್ಮ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಶರದ್ ಪವಾರ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ನ. 30ರಿಂದ ಡಿ. 3ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸುವ ಸಾಧ್ಯತೆಯಿದೆ.
ಸಂಸದರಿಗೆ ತಲಾ 150 ಕೋಟಿ ರೂ. ಆಮಿಷದ ಆರೋಪ
ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರಕ್ಕೆ ಬೆಂಬಲ ಪಡೆಯಲು ಪ್ರತಿಪಕ್ಷಗಳ ಪ್ರತಿಯೊಬ್ಬ ಲೋಕಸಭಾ ಸಂಸದರಿಗೆ ಬಿಜೆಪಿ ತಲಾ 150 ಕೋಟಿ ರೂ. ಆಮಿಷ ಒಡ್ಡುತ್ತಿದೆ ಎಂದು ರಾವತ್ ಈ ಹಿಂದೆಯೂ ಗಂಭೀರ ಆರೋಪ ಮಾಡಿದ್ದರು.
ವಿಶೇಷ ಅಧಿವೇಶನಗಳ ಮೂಲಕ ಜನರ ರಾಜಕೀಯ ಅಧಿಕಾರವನ್ನು ಶಾಶ್ವತವಾಗಿ ಕಸಿದುಕೊಳ್ಳುವುದು ಬಿಜೆಪಿಯ ಉದ್ದೇಶವಾಗಿದೆ ಎಂದು ಅವರು ದೂರಿದ್ದಾರೆ.