ಹೊಸದಿಲ್ಲಿ, ನ. 27: ಕ್ಷೇತ್ರ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ರಾಜಕೀಯ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ. ಕಾಂಗ್ರೆಸ್ ಹಾಗೂ ಶರದ್ ಪವಾರ್ ನೇತೃತ್ವದ ಎನ್ಸಿಪಿ ತಮ್ಮ ಸಂಸದರಿಗೆ ವಿಪ್ ಜಾರಿಗೊಳಿಸಿವೆ.
ನ. 29ರಂದು ಬೆಳಿಗ್ಗೆ 10 ಗಂಟೆಯೊಳಗೆ ಎಲ್ಲ ಲೋಕಸಭಾ ಸದಸ್ಯರು ಹೊಸದಿಲ್ಲಿಗೆ ಆಗಮಿಸುವಂತೆ ಕಾಂಗ್ರೆಸ್ ಸೂಚಿಸಿದೆ. ಎನ್ಸಿಪಿ ತನ್ನ ಎಲ್ಲ 8 ಲೋಕಸಭಾ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿಗೊಳಿಸಿದ್ದು, ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗಿ ಪಕ್ಷದ ನಿಲುವನ್ನು ಬೆಂಬಲಿಸುವಂತೆ ನಿರ್ದೇಶನ ನೀಡಿದೆ.
ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗೆ ಶುಕ್ರವಾರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಕ್ಷೇತ್ರ ಮರುವಿಂಗಡಣೆ ಆಧರಿಸಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನ. 30ರಿಂದ ಲೋಕಸಭೆ ಹಾಗೂ ಡಿ. 2ರಿಂದ ರಾಜ್ಯಸಭೆಯ ಕಲಾಪಗಳು ಪುನರಾರಂಭಗೊಳ್ಳಲಿವೆ. ನಾಲ್ಕು ದಿನಗಳ ವಿಶೇಷ ಅಧಿವೇಶನ ಡಿ. 3ರಂದು ಮುಕ್ತಾಯಗೊಳ್ಳಲಿದೆ. ವಿವಾದಾತ್ಮಕ ಕ್ಷೇತ್ರ ಮರುವಿಂಗಡಣಾ ಮಸೂದೆ ಮಂಡನೆಯ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ.
ಈ ವಿಶೇಷ ಅಧಿವೇಶನವು ಮುಂಗಾರು ಅಧಿವೇಶನದ ಮುಂದುವರಿಕೆಯಾಗಿರಲಿದೆ. ಆಗಸ್ಟ್ 13ರಂದು ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತಾದರೂ, ಅಧಿವೇಶನವನ್ನು ಅಧಿಕೃತವಾಗಿ ಸಮಾಪನಗೊಳಿಸಿರಲಿಲ್ಲ.
ಕಲಾಪಗಳನ್ನು ಪುನರಾರಂಭಿಸುವಂತೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರತ್ಯೇಕ ಪತ್ರಗಳನ್ನು ಬರೆದಿದ್ದರು.
ವಿಶೇಷ ಅಧಿವೇಶನದಲ್ಲಿ ಪರಿಷ್ಕೃತ ಸಂವಿಧಾನ ತಿದ್ದುಪಡಿ ಮಸೂದೆ, ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆ ಹಾಗೂ ಹೊಸ ಕ್ಷೇತ್ರ ಮರುವಿಂಗಡಣಾ ಆಯೋಗ ಸ್ಥಾಪನೆಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.