ಬಳ್ಳಾರಿ, ಸೆ. 9 : ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆ ಸೆ.10ರಂದು ಸಮಾರೋಪಗೊಳ್ಳಲಿದ್ದು, ಪಾದಯಾತ್ರೆ ಮುಗಿದರೂ ಜನರ ಸಮಸ್ಯೆಗಳಿಗೆ ಧ್ವನಿಯಾಗಿರುವ ಪಕ್ಷದ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಬುಧವಾರ ಬಳ್ಳಾರಿ ನಗರ ಪ್ರವೇಶಿಸಿದ ಪಾದಯಾತ್ರೆಯ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗುರುವಾರ ಬೆಳಿಗ್ಗೆ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಲಾಗುವುದು. ಮಧ್ಯಾಹ್ನ ವಾಲ್ಮೀಕಿ ವೃತ್ತದಿಂದ ಸಮಾವೇಶ ನಡೆಯುವ ಸ್ಥಳದವರೆಗೆ ಪಾದಯಾತ್ರೆ ನಡೆಸಿ, ಸಂಜೆ 4.30ಕ್ಕೆ ಸಮಾರೋಪ ಸಮಾವೇಶ ಆರಂಭಿಸಲಾಗುವುದು ಎಂದು ತಿಳಿಸಿದರು.
ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ್ ಅಗರ್ವಾಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಹತ್ತು ದಿನಗಳ ಪಾದಯಾತ್ರೆ ಮುಕ್ತಾಯಗೊಳ್ಳುತ್ತಿರುವುದು ಹೋರಾಟದ ಅಂತ್ಯವಲ್ಲ. ರಾಜ್ಯದಲ್ಲಿ ಜನಪರ ಆಡಳಿತಕ್ಕಾಗಿ ಬಿಜೆಪಿ ನಿರಂತರವಾಗಿ ಹೋರಾಟ ನಡೆಸಲಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದೆ ಎಂದು ವಿಜಯೇಂದ್ರ ಆರೋಪಿಸಿದರು.
ಈ ಪಾದಯಾತ್ರೆ ತಮ್ಮ ರಾಜಕೀಯ ಜೀವನದ ಮಹತ್ವದ ತಿರುವಾಗಿದೆ. ಯಾತ್ರೆಯುದ್ದಕ್ಕೂ ಮಹಿಳೆಯರು, ರೈತರು, ಯುವಕರು ಹಾಗೂ ಅಲೆಮಾರಿ ಸಮುದಾಯದವರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ದೊರೆತಿದ್ದು, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಸೆ.10ರ ಸಮಾರೋಪ ಸಮಾವೇಶಕ್ಕೆ ಸುಮಾರು 40ರಿಂದ 50 ಸಾವಿರ ಜನರು ಆಗಮಿಸುವ ನಿರೀಕ್ಷೆಯಿದೆ. ಜಿಲ್ಲಾಡಳಿತ ಸಂಜೆ 6.30ರವರೆಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದ್ದರೂ, ಹೋರಾಟ ಯಾವಾಗ ಮುಕ್ತಾಯವಾಗಬೇಕು ಎಂಬುದನ್ನು ಅಂತಿಮವಾಗಿ ಜನರೇ ನಿರ್ಧರಿಸಲಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.