LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಇನ್ನಷ್ಟು ನಾಯಕರ ಮೇಲೆ ದಾಳಿ ಸಾಧ್ಯತೆ, ಎಚ್ಚರಿಕೆಯಿಂದಿರಿ: ಮುಖ್ಯಮಂತ್ರಿ

ಬೆಂಗಳೂರು, ಸೆ. 9 : ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಇನ್ನಷ್ಟು ನಾಯಕರು, ಸಚಿವರು ಹಾಗೂ ಶಾಸಕರನ್ನು ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳು ದಾಳಿ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷದ ಸಚಿವರು ಮತ್ತು ಶಾಸಕರು ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿರುವ ಶೋಧ ಕಾರ್ಯಾಚರಣೆ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಬಿಜೆಪಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಯಾವುದೇ ತನಿಖೆಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ತನಿಖೆಗೆ ಹೆದರುವ ಪ್ರಶ್ನೆಯೇ ಇಲ್ಲ. ಆದರೆ ಸುಳ್ಳು ಆರೋಪಗಳನ್ನು ಸೃಷ್ಟಿಸುವುದು, ಇಲ್ಲದ ಕಥೆಗಳನ್ನು ಕಟ್ಟುವುದು ಹಾಗೂ ಜನರನ್ನು ದಾರಿ ತಪ್ಪಿಸುವ ಪ್ರಯತ್ನಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ಕ್ರಮಗಳನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಶಿವಕುಮಾರ ತಿಳಿಸಿದರು.

ತನಿಖಾ ಸಂಸ್ಥೆಗಳ ಕ್ರಮಗಳು ಬಿಜೆಪಿ ನಾಯಕರ ವಿರುದ್ಧ ಏಕೆ ನಡೆಯುತ್ತಿಲ್ಲ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು. ಬೋವಿ ಹಗರಣದ ವಿಚಾರದಲ್ಲಿ ಜಾರಿ ನಿರ್ದೇಶನಾಲಯ ಏಕೆ ತನಿಖೆಗೆ ಮುಂದಾಗಿಲ್ಲ ಎಂಬುದಕ್ಕೆ ಉತ್ತರ ನೀಡಬೇಕು. ಬಿಡದಿ ಹಾಗೂ ನೈಸ್ ಯೋಜನೆಗಳಿಗೆ ಸಹಿ ಹಾಕಿ ಅವುಗಳನ್ನು ಆರಂಭಿಸಿದವರು ಬಿಜೆಪಿಯವರು. ಆದರೆ ಈಗ ಆರೋಪಗಳನ್ನು ಕಾಂಗ್ರೆಸ್ ನಾಯಕರ ವಿರುದ್ಧ ಮಾಡಲಾಗುತ್ತಿದೆ. ಅಂತಿಮವಾಗಿ ಸತ್ಯ ಹೊರಬರಲಿದೆ ಎಂದರು.

ಸತೀಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸರ್ಕಾರ ಮತ್ತು ಪಕ್ಷ ಅವರ ಬೆಂಬಲಕ್ಕೆ ಸಂಪೂರ್ಣವಾಗಿ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದರು.

ಸಚಿವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಸ್ಥಳಗಳಲ್ಲಿಯೂ ಜಾರಿ ನಿರ್ದೇಶನಾಲಯ ಶೋಧ ನಡೆಸಿರುವುದು ದುರದೃಷ್ಟಕರ. ತನಿಖಾಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಸತೀಶ ಜಾರಕಿಹೊಳಿ ಹಾಗೂ ಅವರ ಕುಟುಂಬದವರು ಸಮರ್ಥವಾಗಿ ಉತ್ತರಿಸಲಿದ್ದಾರೆ. ತನಿಖೆಯ ಮೂಲಕ ಎಲ್ಲ ಸಂಗತಿಗಳೂ ಬಹಿರಂಗವಾಗಲಿವೆ ಎಂದು ಹೇಳಿದರು.

ಸತೀಶ ಜಾರಕಿಹೊಳಿ ಪ್ರಗತಿಪರ ಚಿಂತನೆಯ, ದೂರದೃಷ್ಟಿಯುಳ್ಳ ಹಾಗೂ ಪ್ರಾಮಾಣಿಕ ರಾಜಕಾರಣಿ. ಅವರು ಯಾವುದೇ ತಪ್ಪು ಮಾಡಿಲ್ಲ ಎಂಬ ಸಂಪೂರ್ಣ ವಿಶ್ವಾಸ ತಮಗಿದೆ ಎಂದು ಶಿವಕುಮಾರ ತಿಳಿಸಿದರು.

ಇದೇ ವೇಳೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಇತರ ಪ್ರಮುಖ ನಾಯಕರು, ಸಚಿವರು ಮತ್ತು ಶಾಸಕರ ಮೇಲೆಯೂ ತನಿಖಾ ಸಂಸ್ಥೆಗಳ ಕ್ರಮಗಳು ನಡೆಯಬಹುದೆಂಬ ಮಾಹಿತಿ ಮತ್ತು ಆತಂಕ ಇರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸತೀಶ ಜಾರಕಿಹೊಳಿ ಸುತ್ತ ಇಡಿ ಬಲೆಬಳ್ಳಾರಿ ಚಲೋ ಪಾದಯಾತ್ರೆ ನಾಳೆ ಮುಕ್ತಾಯ, ಹೋರಾಟ ಮುಂದುವರಿಯಲಿದೆ: ವಿಜಯೇಂದ್ರ5 ರಾಜ್ಯಗಳ ಚುನಾವಣೆ ವೇಳೆ ಬಿಜೆಪಿಗೆ ₹1,473 ಕೋಟಿ ದೇಣಿಗೆ!ಅಮೆರಿಕದ ಮಾನವರಹಿತ ಜಲಾಂತರ್ಗಾಮಿ ವಶಕ್ಕೆ ಪಡೆದ ಇರಾನ್ಸೌದಿ ಮೇಲೆ ಕ್ಷಿಪಣಿ ದಾಳಿ; ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಸಹಿಸುವುದಿಲ್ಲ ಎಂದ ಭಾರತಇನ್ನಷ್ಟು ನಾಯಕರ ಮೇಲೆ ದಾಳಿ ಸಾಧ್ಯತೆ, ಎಚ್ಚರಿಕೆಯಿಂದಿರಿ: ಮುಖ್ಯಮಂತ್ರಿಜಾತಿವಾದ ಕೊನೆಗೊಂಡರೆ ಮೀಸಲಾತಿಯ ಅಗತ್ಯವೂ ಇರುವುದಿಲ್ಲ: ಕೇಂದ್ರ ಸಚಿವ ಅಠವಳೆವಿದ್ಯಾರ್ಥಿಗೆ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ?: ಸುಪ್ರೀಂ ಕೋರ್ಟ ಕಿಡಿಭಾರತ ರತ್ನ ಸಿ.ಎನ್.ಆರ್. ರಾವ್‌ಗೆ ನೋಟಿಸ್ : ಚುನಾವಣಾಧಿಕಾರಿ ಸ್ಪಷ್ಟನೆಸತೀಶ ಜಾರಕಿಹೊಳಿ ಮೇಲಿನ ಇ.ಡಿ ಶೋಧ ರಾಜಕೀಯ ಪ್ರೇರಿತ: ಡಿ.ಕೆ.ಶಿವಕುಮಾರ