ಬೆಳಗಾವಿ, ಸೆ. 23 : (ಸಮದರ್ಶಿ ಸುದ್ದಿ) - ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪವನ್ನು ರಾಜ್ಯ ಸರ್ಕಾರ ತನ್ನ ಅಧೀನದಲ್ಲೇ ಉಳಿಸಿಕೊಳ್ಳಬೇಕು. ಯಾವುದೇ ಖಾಸಗಿ ಸಂಸ್ಥೆ ಅಥವಾ ಮಠಕ್ಕೆ ಅದರ ನಿರ್ವಹಣೆಯನ್ನು ವಹಿಸಬಾರದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ಆಗ್ರಹಿಸಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಭವ ಮಂಟಪದ ದೈನಂದಿನ ನಿರ್ವಹಣೆ ಹಾಗೂ ವಿಶೇಷ ಕಾರ್ಯಕ್ರಮಗಳಿಗಾಗಿ ಸರ್ಕಾರ, ಲಿಂಗಾಯತ ಮಠಗಳು ಮತ್ತು ವಿವಿಧ ಲಿಂಗಾಯತ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ವಿಶೇಷ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು. ಮಂಟಪಕ್ಕೆ ಬರುವವರಿಗೆ ನಿತ್ಯ ದಾಸೋಹದ ವ್ಯವಸ್ಥೆ ಮಾಡಬೇಕು. ವಚನ ಅಧ್ಯಯನ ಶಿಬಿರ, ಕಾರ್ಯಾಗಾರ ಹಾಗೂ ಕಾಯಕ ತತ್ವ, ಸ್ತ್ರೀ ಸಮಾನತೆ ಮತ್ತು ಜಾತಿ ವಿನಾಶದ ಕುರಿತು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂಬ ನಿರ್ಣಯವನ್ನು ಮಹಾಸಭಾದ ರಾಷ್ಟ್ರೀಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.
ಅನುಭವ ಮಂಟಪವನ್ನು 2027ರ ಮಾರ್ಚ್‌ನಲ್ಲಿ ಉದ್ಘಾಟಿಸುವುದಾಗಿ ಸಚಿವ ಈಶ್ವರ ಖಂಡ್ರೆ ಹೇಳಿದ್ದರೂ, ಕಾಮಗಾರಿ ಪೂರ್ಣಗೊಳ್ಳಲು ಸರ್ಕಾರದಿಂದ ಇನ್ನೂ ₹450 ಕೋಟಿ ಅನುದಾನ ಬಿಡುಗಡೆಯಾಗಬೇಕಿದೆ ಎಂದು ಜಾಮದಾರ ಹೇಳಿದರು. ಸಂಪರ್ಕ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ದಾಸೋಹ ಭವನ, ಯಾತ್ರಿ ನಿವಾಸ ಮತ್ತು ಪಾರ್ಕಿಂಗ್ ಸ್ಥಳ ನಿರ್ಮಾಣಕ್ಕೂ ಇನ್ನೂ ಅನುಮೋದನೆ ಹಾಗೂ ಟೆಂಡರ್ ಪ್ರಕ್ರಿಯೆ ಆಗಿಲ್ಲ. ಈ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ಸುಮಾರು ₹100 ಕೋಟಿ ಅಗತ್ಯವಿದೆ ಎಂದು ಅವರು ತಿಳಿಸಿದರು.
ಈ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳುವ ಮುನ್ನ ತರಾತುರಿಯಲ್ಲಿ ಉದ್ಘಾಟಿಸುವುದು ಸರಿಯಲ್ಲ. ಆದ್ದರಿಂದ ಅನುಭವ ಮಂಟಪದ ಉದ್ಘಾಟನೆಯನ್ನು 2028ರ ಜನವರಿಯವರೆಗೆ ಮುಂದೂಡಬೇಕು ಎಂದು ಅವರು ಆಗ್ರಹಿಸಿದರು.
‘ಬಸವ ಭಾರತ’ ಕಾರ್ಯಕ್ರಮ ನಡೆಸುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ ಬಸವ ತತ್ವವನ್ನು ವಿರೂಪಗೊಳಿಸುವುದು ಅಥವಾ ತಿರುಚುವುದು ಹಾಗೂ ಕಾರ್ಯಕ್ರಮದಲ್ಲಿ ಹಿಂದುತ್ವವನ್ನು ಸೇರಿಸುವ ಪ್ರಯತ್ನ ನಡೆದರೆ ಅದನ್ನು ವಿರೋಧಿಸಲಾಗುವುದು ಎಂದು ಜಾಮದಾರ ಹೇಳಿದರು.
ಜಾತಿ ಜನಗಣತಿ ಕುರಿತು ಲಿಂಗಾಯತ ಸಮುದಾಯಕ್ಕೆ ಮಾರ್ಗದರ್ಶನ ನೀಡಲು ಕರಪತ್ರಗಳನ್ನು ಮುದ್ರಿಸಿ ರಾಜ್ಯದ ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಂಚುವ ವಿಶೇಷ ಅಭಿಯಾನವನ್ನು 2027ರ ಜನವರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಜೊತೆಗೆ ಅಂತರ್ಜಾತಿ ಹಾಗೂ ಅಂತರ್‌ಧರ್ಮೀಯ ವಿವಾಹವಾಗುವ ದಂಪತಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಘಟಕ ರಚಿಸಲಾಗುವುದು ಎಂದರು.
ಲಿಂಗಾಯತ ಸಮುದಾಯದಲ್ಲಿರುವ 38 ವಿವಿಧ ಪಂಗಡಗಳ ಸಂಘಟನೆಗಳನ್ನು ಸಂಪರ್ಕಿಸಿ ಅವುಗಳನ್ನು ಮಹಾಸಭಾದ ಸದಸ್ಯತ್ವ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ ಎಂದು ಜಾಮದಾರ ತಿಳಿಸಿದರು.