ಬೆಳಗಾವಿ, ಸೆ. 23 : (ಸಮದರ್ಶಿ ಸುದ್ದಿ) - ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 26ನೇ ವಾರ್ಷಿಕ ಘಟಿಕೋತ್ಸವ ಸೆ.26ರಂದು ಬೆಳಿಗ್ಗೆ 11 ಗಂಟೆಗೆ ಜ್ಞಾನ ಸಂಗಮ ಆವರಣದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಘಟಿಕೋತ್ಸವ ಭಾಷಣ ಮಾಡಲಿದ್ದು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ 57,697 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 52,025 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಿ.ಟೆಕ್ ಮತ್ತು ಬಿ.ಇ. ಸೇರಿದಂತೆ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಪದವಿಗೆ ಅರ್ಹರಾದವರಲ್ಲಿ 27,437 ಬಾಲಕರು ಹಾಗೂ 24,583 ಬಾಲಕಿಯರಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇ.85.56 ಇದ್ದರೆ, ಬಾಲಕಿಯರದು ಶೇ.95.83 ಆಗಿದ್ದು, ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ ಎಂದರು.
ಮೂವರಿಗೆ ಗೌರವ ಡಾಕ್ಟರೇಟ್
ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಸಿಎಂಆರ್ ಜ್ಞಾನಧಾರ ಟ್ರಸ್ಟ್ ಅಧ್ಯಕ್ಷೆ ಡಾ. ಸಬಿತಾ ರಾಮಮೂರ್ತಿ, ಆರ್.ವಿ. ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ. ಎಂ.ಪಿ. ಶ್ಯಾಮ್ ಹಾಗೂ ಎಐಸಿಟಿಇ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಂ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಒಟ್ಟು 45 ವಿದ್ಯಾರ್ಥಿಗಳಿಗೆ 94 ಚಿನ್ನದ ಪದಕಗಳು ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 38 ವಿಟಿಯು ಚಿನ್ನದ ಪದಕಗಳು ಹಾಗೂ 56 ದತ್ತಿ ನಿಧಿ ಚಿನ್ನದ ಪದಕಗಳು ಸೇರಿವೆ. ಇದರೊಂದಿಗೆ 300 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ.
ದಾವಣಗೆರೆಯ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್.ಎಂ. ವಿಶ್ವನಾಥ್ 12 ಚಿನ್ನದ ಪದಕಗಳನ್ನು ಪಡೆದು ಅತಿ ಹೆಚ್ಚು ಪದಕ ಗಳಿಸಿದ ವಿದ್ಯಾರ್ಥಿಯಾಗಿದ್ದಾರೆ. ನಿಪ್ಪಾಣಿಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಸಾಕ್ಷಿ ಎಸ್. ಹಡಲಗೆ 8 ಚಿನ್ನದ ಪದಕ ಪಡೆದಿದ್ದಾರೆ.
ಬೆಂಗಳೂರಿನ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಿನ್ಮಯಿ ಎಂ. ಕಶ್ಯಪ್ ಹಾಗೂ ಶಿವಮೊಗ್ಗದ ಜೆಎನ್‌ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಬಿ.ಎಂ. ಧನ್ಯಶ್ರೀ ತಲಾ 7 ಚಿನ್ನದ ಪದಕ ಪಡೆದಿದ್ದು, ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎ.ಸಿ. ಕವಿನಾ 6 ಚಿನ್ನದ ಪದಕ ಪಡೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ (ಮೌಲ್ಯಮಾಪನ) ಪ್ರೊ. ಯು.ಜೆ. ಉಜ್ವಲ್ ಹಾಗೂ ಕುಲಸಚಿವ (ಆಡಳಿತ) ಪ್ರಸಾದ ಬಿ. ರಾಂಪುರ ಉಪಸ್ಥಿತರಿದ್ದರು.