ಡೆಹ್ರಾಡೂನ್, ನ. 4: ಉತ್ತರಾಖಂಡದ ಪೌರಿ ಜಿಲ್ಲೆಯ ಖಂಡುಸೈನ್ ಗ್ರಾಮದಲ್ಲಿ ಚಿರತೆ ದಾಳಿಗೆ ಏಳು ವರ್ಷದ ಬಾಲಕಿ ಬಲಿಯಾದ ಘಟನೆ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ಶಾಸಕನ ಕಾರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಸುಮಾರು 90 ನಿಮಿಷಗಳ ಕಾಲ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಸಂಜೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿ, ಸಮೀಪದ ಪೊದೆಗಳತ್ತ ಎಳೆದೊಯ್ದಿದೆ. ಕುಟುಂಬಸ್ಥರ ಕಿರುಚಾಟ ಕೇಳಿ ಗ್ರಾಮಸ್ಥರು ಧಾವಿಸಿದರೂ ಬಾಲಕಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಘಟನೆಯಿಂದ ಆಕ್ರೋಶಗೊಂಡ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಶಾಸಕನ ಕಾರನ್ನು ಸುತ್ತುವರಿದು ಸರಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಶಾಸಕ ಕಾರಿನೊಳಗೇ ಉಳಿದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.
ಚಿರತೆಗಳ ಹಾವಳಿ ನಿಯಂತ್ರಿಸಲು ಗಸ್ತು ಹೆಚ್ಚಿಸುವಂತೆ ಹಾಗೂ ಬೋನುಗಳನ್ನು ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
25 ವರ್ಷಗಳಲ್ಲಿ ಚಿರತೆ ದಾಳಿಗೆ 539 ಮಂದಿ ಬಲಿ
ಉತ್ತರಾಖಂಡದಲ್ಲಿ 2000ರ ಜನವರಿಯಿಂದ 2025ರ ಮೇವರೆಗೆ ವನ್ಯಜೀವಿಗಳ ದಾಳಿಗೆ 1,241 ಮಂದಿ ಮೃತಪಟ್ಟಿದ್ದು, ಅವರಲ್ಲಿ 539 ಮಂದಿ ಚಿರತೆ ದಾಳಿಗೆ ಬಲಿಯಾಗಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.
ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವುದಕ್ಕೆ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ, ಬೆಟ್ಟದ ಹಳ್ಳಿಗಳಿಂದ ಜನರ ವಲಸೆ ಹಾಗೂ ಜನವಸತಿ ಪ್ರದೇಶಗಳಲ್ಲಿ ಪೊದೆಗಳ ಹೆಚ್ಚಳ ಪ್ರಮುಖ ಕಾರಣಗಳಾಗಿವೆ ಎಂದು ವನ್ಯಜೀವಿ ತಜ್ಞ ರಂಗನಾಥ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಉತ್ತರಾಖಂಡದ ಶೇ.79ರಷ್ಟು ಚಿರತೆಗಳು ಸಂರಕ್ಷಿತ ಅರಣ್ಯ ಪ್ರದೇಶಗಳ ಹೊರಗೆ ವಾಸಿಸುತ್ತಿವೆ. ಪೌರಿ, ಅಲ್ಮೋರಾ, ತೆಹ್ರಿ ಹಾಗೂ ನೈನಿತಾಲ್ ಜಿಲ್ಲೆಗಳಲ್ಲಿ ಚಿರತೆಗಳು ಮನೆಗಳು, ಶಾಲೆಗಳು ಮತ್ತು ಗ್ರಾಮೀಣ ರಸ್ತೆಗಳ ಸಮೀಪ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಈ ವರ್ಷವೊಂದರಲ್ಲೇ ರಾಜ್ಯದಲ್ಲಿ ಚಿರತೆ ದಾಳಿಗೆ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಮಕ್ಕಳ ಸಂಖ್ಯೆಯೂ ಗಣನೀಯವಾಗಿದೆ.
10 ಲಕ್ಷ ರೂ. ಪರಿಹಾರಕ್ಕೆ ಆಗ್ರಹ
ಬಾಲಕಿಯನ್ನು ಕೊಂದ ಚಿರತೆಯನ್ನು ನರಭಕ್ಷಕ ಎಂದು ಘೋಷಿಸಿ ತಕ್ಷಣ ಸೆರೆಹಿಡಿಯಬೇಕು. ಮೃತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಗ್ರಾಮದಲ್ಲಿ ಸೌರ ಬೇಲಿ, ಬೀದಿ ದೀಪಗಳನ್ನು ಅಳವಡಿಸುವುದರೊಂದಿಗೆ ಅರಣ್ಯ ಇಲಾಖೆಯ ಶಾಶ್ವತ ನಿಗಾ ತಂಡವನ್ನು ನಿಯೋಜಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.