ವಾಷಿಂಗ್ಟನ್, ನ. 4: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಮಿಚಿಗನ್ ರಾಜ್ಯದಿಂದ ಸೆನೆಟ್ಗೆ ಆಯ್ಕೆಯಾಗಿರುವ 42 ವರ್ಷದ ಅಬ್ದುಲ್ ಎಲ್-ಸಯ್ಯದ್, ಅಮೆರಿಕದ ಇತಿಹಾಸದಲ್ಲೇ ಮೊದಲ ಮುಸ್ಲಿಂ ಸೆನೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಅವರಿಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದೊಂದಿಗೆ ಕೌಟುಂಬಿಕ ನಂಟಿದೆ.
ಈಜಿಪ್ಟ್ ಮೂಲದ ವಲಸಿಗ ಪೋಷಕರಿಗೆ ಅಮೆರಿಕದಲ್ಲಿ ಜನಿಸಿದ ಅಬ್ದುಲ್ ಎಲ್-ಸಯ್ಯದ್ ಸಾರ್ವಜನಿಕ ಆರೋಗ್ಯ ತಜ್ಞರಾಗಿದ್ದು, ವೈದ್ಯಕೀಯ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ, ದುಡಿಯುವ ಕುಟುಂಬಗಳ ಆರ್ಥಿಕ ಹೊರೆ ಕಡಿಮೆ ಮಾಡುವುದು ಹಾಗೂ ರಾಜಕೀಯದಲ್ಲಿ ದೊಡ್ಡ ಕಂಪನಿಗಳ ಪ್ರಭಾವ ನಿಯಂತ್ರಿಸುವುದು ಅವರ ಪ್ರಮುಖ ಚುನಾವಣಾ ಭರವಸೆಗಳಾಗಿದ್ದವು.
ಅಬ್ದುಲ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರು ಭಟ್ಕಳ ಮೂಲದ ಅಮೆರಿಕದ ಖ್ಯಾತ ಮೂತ್ರಪಿಂಡ ತಜ್ಞ ಡಾ. ತಯ್ಯಬ್ ಜುಕಾಕು ಅವರ ಪುತ್ರಿ. ತಯ್ಯಬ್ ಅವರು ಭಟ್ಕಳದ ಹಿರಿಯ ರಾಜಕೀಯ ಧುರೀಣ ದಿವಂಗತ ಶಂಸುದ್ದೀನ್ ಜುಕಾಕು ಅವರ ಪುತ್ರರಾಗಿದ್ದಾರೆ.
ಶಂಸುದ್ದೀನ್ ಜುಕಾಕು ಅವರು ಬಾಂಬೆ ಪ್ರೆಸಿಡೆನ್ಸಿಯಿಂದ ಒಮ್ಮೆ ಹಾಗೂ ಹೊನ್ನಾವರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಿ.ಡಿ. ಜತ್ತಿ ಅವರ ಸರಕಾರದಲ್ಲಿ ಆರ್ಥಿಕ ಖಾತೆಯ ಸಹಾಯಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಅಬ್ದುಲ್ ಅವರ ಪತ್ನಿ ಸಾರಾ ಅವರು ಶಂಸುದ್ದೀನ್ ಜುಕಾಕು ಅವರ ಮೊಮ್ಮಗಳಾಗಿದ್ದು, ಈ ಮೂಲಕ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ ಎನ್ನಲಾದ ಅಬ್ದುಲ್ ಅವರಿಗೆ ಕರ್ನಾಟಕದ ಭಟ್ಕಳದೊಂದಿಗೆ ವಿಶೇಷ ಸಂಬಂಧವಿದೆ.