ಹೊಸದಿಲ್ಲಿ, ಅ.15: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪ ಹಾಗೂ ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ, ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಹಾಗೂ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಪ್ರತಿಭಟನೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಬಳಿಯಿರುವ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ನಿರ್ದೇಶನ ನೀಡಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
ವಿಚಾರಣೆ ವೇಳೆ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ನ್ಯಾಯಾಲಯದ ಆದೇಶದ ನೆಪದಲ್ಲಿ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅದನ್ನು ಕೂಡಲೇ ಮರುಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ವಕೀಲೆ ಮುಕ್ತಾ ಗುಪ್ತಾ, ಶಾಂತಿಯುತವಾಗಿ ಪ್ರತಿಭಟಿಸುವುದು ನಾಗರಿಕರ ಸಾಂವಿಧಾನಿಕ ಹಕ್ಕಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಅದಕ್ಕೆ ಅವಕಾಶ ಕಲ್ಪಿಸಬೇಕು ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜಂತರ್ ಮಂತರ್ ರದ್ದತಿಗೆ ನ್ಯಾಯಾಲಯದ ಯಾವುದೇ ಆದೇಶ ಕಾರಣವಲ್ಲ. ಉನ್ನತ ಮಟ್ಟದ ಸಮಿತಿಯ ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ನಿಲುವನ್ನು ಪರಿಶೀಲಿಸಲು ಮುಂದಾದ ನ್ಯಾಯಪೀಠವು ಜಂತರ್ ಮಂತರ್ ರದ್ದತಿ ಕ್ರಮಕ್ಕೆ ತಕ್ಷಣ ಮಧ್ಯಂತರ ತಡೆ ನೀಡಲು ನಿರಾಕರಿಸಿತು.
ಪ್ರತಿಭಟನೆಯ ವರದಿಗಾರಿಕೆಗೆ ತೆರಳಿದ್ದ ಮಹಿಳಾ ಪತ್ರಕರ್ತೆಯರ ಮೇಲೆ ಕಿರುಕುಳ ಹಾಗೂ ದೌರ್ಜನ್ಯ ನಡೆದಿದೆ ಎಂಬ ಆರೋಪಗಳನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ದೂರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಅನುಮತಿ ನೀಡಿದೆ.
ಮಹಿಳಾ ಪತ್ರಕರ್ತೆಯರ ಮೇಲಿನ ದೌರ್ಜನ್ಯದ ಆರೋಪಗಳ ತನಿಖೆಗೆ ನಿವೃತ್ತ ಮಹಿಳಾ ನ್ಯಾಯಾಧೀಶರು, ಮಾಜಿ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಮಹಿಳಾ ಸಾಮಾಜಿಕ ಹೋರಾಟಗಾರ್ತಿಯರನ್ನು ಒಳಗೊಂಡ ತನಿಖಾ ಸಮಿತಿ ರಚಿಸುವ ಪ್ರಸ್ತಾವಕ್ಕೂ ನ್ಯಾಯಪೀಠ ಸಮ್ಮತಿ ಸೂಚಿಸಿದೆ ಎಂದು ವರದಿಯಾಗಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ 46 ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿರುವುದನ್ನು ಗಮನಿಸಿದ ನ್ಯಾಯಾಲಯ, ಹೊಸ ಅರ್ಜಿಗಳನ್ನು ಸಲ್ಲಿಸುವುದನ್ನು ತಪ್ಪಿಸುವಂತೆ ವಕೀಲರಿಗೆ ಮನವಿ ಮಾಡಿತು. ವಿಚಾರಣೆಯ ಸಮನ್ವಯಕ್ಕಾಗಿ ಉಭಯ ಪಕ್ಷಗಳು ನೋಡಲ್ ವಕೀಲರನ್ನು ನೇಮಿಸಿಕೊಳ್ಳುವಂತೆ ಸೂಚಿಸಿತು.
ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರ ಲಿಖಿತ ಪ್ರತಿಕ್ರಿಯೆಗಾಗಿ ವಿಚಾರಣೆಯನ್ನು ಮುಂದೂಡಲಾಗಿದೆ.