ಬೆಂಗಳೂರು, ನ. 2: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ ಸ್ಟಿಂಗ್ ಕಾರ್ಯಾಚರಣೆ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ನಡುವಿನ ಸಂಪರ್ಕದ ಕುರಿತು ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ತಮ್ಮ ಆರೋಪಕ್ಕೆ ಪೂರಕವೆಂದು ಹೇಳಲಾದ ಕರೆ ವಿವರಗಳ ದಾಖಲೆಗಳನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ.
ನಗರದ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪ್ರಜ್ವಲ್ ರೇವಣ್ಣ ಅವರ ವಿವಾದಾತ್ಮಕ ವಿಡಿಯೋಗಳು ಬಹಿರಂಗಗೊಳ್ಳುವ ಮೊದಲೇ, 2023ರ ಆಗಸ್ಟ್ 5 ಮತ್ತು 6ರಂದು ಕಾರ್ತಿಕ್ ಅವರು ಡಿ.ಕೆ. ಶಿವಕುಮಾರ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ಆರೋಪಿಸಿದರು. ಈ ಭೇಟಿಯ ಉದ್ದೇಶವೇನು? ಕಾರ್ತಿಕ್ ಮತ್ತು ಶಿವಕುಮಾರ ನಡುವಿನ ಸಂಬಂಧವೇನು? ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಸ್ಟಿಂಗ್ ವಿಡಿಯೋ ಪ್ರಸಾರ ಮಾಡಿದ ವ್ಯಕ್ತಿಯೊಬ್ಬರು ದೆಹಲಿಯ ತಮ್ಮ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದರು ಎಂಬ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ ಸಿಂಗ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕುಮಾರಸ್ವಾಮಿ, ತಮ್ಮ ನಿವಾಸಕ್ಕೆ ಬಂದವರ ಬಗ್ಗೆ ತನಿಖೆ ನಡೆಸುವ ಪೊಲೀಸರು, ಶಿವಕುಮಾರ ಅವರ ನಿವಾಸಕ್ಕೆ ಭೇಟಿ ನೀಡಿದ ಕಾರ್ತಿಕ್ ಕುರಿತು ಏಕೆ ವಿಚಾರಣೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ತಮ್ಮ ಕುಟುಂಬವನ್ನು ರಾಜಕೀಯವಾಗಿ ಗುರಿಯಾಗಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸಿದ್ದಾರೆ ಎಂದು ದೂರಿದರು.
ಅಕ್ಟೋಬರ್ 21ರಂದು ಪೊಲೀಸರು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಪ್ರಕರಣವನ್ನು ಕಟ್ಟುಕಥೆ ಎಂದು ಪೊಲೀಸ್ ಆಯುಕ್ತರೇ ಹೇಳಿರುವಾಗ ಮತ್ತೆ ತನಿಖೆ ನಡೆಸುತ್ತಿರುವುದೇಕೆ? ಸಿದ್ದರಾಮಯ್ಯ ಅವರಿಗೆ ದೋಷಮುಕ್ತ ಪ್ರಮಾಣಪತ್ರ ನೀಡಲು ಹಾಗೂ ಪ್ರಕರಣದ ಹಿಂದಿರುವವರನ್ನು ರಕ್ಷಿಸಲು ತನಿಖೆ ನಡೆಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ತನಿಖೆಯ ಹೊಣೆ ಹೊತ್ತಿದ್ದ ಕೇಂದ್ರ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ಸತೀಶ್ ಅವರನ್ನು ಬದಲಾಯಿಸಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಸ್ಟಿಂಗ್ ವಿಡಿಯೋ ಅಸಲಿಯೇ, ಕೃತಕವಾಗಿ ಸೃಷ್ಟಿಸಲಾಗಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಸಂಕಲನ ಮಾಡಲಾಗಿದೆಯೇ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧದ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಡಿ.ಕೆ. ಶಿವಕುಮಾರ ವಿಧಾನಸಭೆಯಲ್ಲಿ ಮಾತನಾಡಿದ್ದ ವಿಡಿಯೋ ತುಣುಕನ್ನು ಪ್ರದರ್ಶಿಸಿದ ಅವರು, ಅಂದು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ಒತ್ತಾಯಿಸಿದ್ದ ಶಿವಕುಮಾರ ಈಗ ಅದೇ ನಿಲುವನ್ನು ಏಕೆ ಅನುಸರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಸ್ಟಿಂಗ್ ಕಾರ್ಯಾಚರಣೆಗಳ ಮೂಲಕ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಇದರ ಹಿಂದಿರುವವರನ್ನು ಪತ್ತೆಹಚ್ಚಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವ ಅವರ ಪಾತ್ರದ ಬಗ್ಗೆಯೂ ಪ್ರಶ್ನೆ ಎತ್ತಿದ ಅವರು, ಸಂಬಂಧಪಟ್ಟ ಮಹಿಳೆ 2015ರಲ್ಲಿಯೇ ಕೃಪಾ ಆಳ್ವ ಅವರಿಗೆ ಇಮೇಲ್ ಕಳುಹಿಸಿದ್ದರು ಎಂದು ಪ್ರತಿಪಾದಿಸಿದರು. 2011ರ ಘಟನೆಗೆ ಸಂಬಂಧಿಸಿದ ವಿಷಯವನ್ನು 2023ರಲ್ಲಿ ಏಕೆ ಚಿತ್ರೀಕರಿಸಲಾಯಿತು? ಆ ಮಹಿಳೆಯನ್ನು ಅಲ್ಲಿಗೆ ಕರೆತಂದವರು ಯಾರು? ಕೃಪಾ ಆಳ್ವ ಮತ್ತು ಆ ಮಹಿಳೆಯ ನಡುವಿನ ಸಂಪರ್ಕವೇನು ಎಂದು ಪ್ರಶ್ನಿಸಿದರು. ಕೃಪಾ ಆಳ್ವ ಅವರನ್ನು ವಿದೇಶಕ್ಕೆ ಕಳುಹಿಸಿರುವುದೇಕೆ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಸ್ಟಿಂಗ್ ವಿಡಿಯೋ ಪ್ರಸಾರಕ್ಕೆ ಸಂಬಂಧಿಸಿದಂತೆ ಹೆಸರು ಕೇಳಿಬಂದಿರುವ ರಿತೇಶ ಪಾಂಡೆ ಅವರೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ಅವರ ಮುಖವನ್ನೇ ತಾವು ನೋಡಿಲ್ಲ ಎಂದರು. ದೆಹಲಿಯ ತಮ್ಮ ನಿವಾಸಕ್ಕೆ ಅನೇಕರು ಭೇಟಿ ನೀಡುತ್ತಾರೆ. ಯಾರಾದರೂ ಅಲ್ಲಿಗೆ ಬಂದಿದ್ದರೆ ಪೊಲೀಸರು ತನಿಖೆ ನಡೆಸಲಿ. ಮುಚ್ಚಿಡುವಂತಹ ಯಾವುದೇ ವಿಷಯ ತಮ್ಮ ಬಳಿ ಇಲ್ಲ ಎಂದು ಹೇಳಿದರು.
ತನಿಖಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಬಾರದು. ಅಧಿಕಾರ ಶಾಶ್ವತವಲ್ಲ. ಕಾಲಚಕ್ರ ತಿರುಗುತ್ತಿರುತ್ತದೆ. ಆದ್ದರಿಂದ ಅಧಿಕಾರಿಗಳು ಕಾನೂನಿಗೆ ಅನುಗುಣವಾಗಿ ಪ್ರಾಮಾಣಿಕ ತನಿಖೆ ನಡೆಸಬೇಕು ಎಂದು ಎಚ್ಚರಿಸಿದರು.
ತಮ್ಮ ದೆಹಲಿ ನಿವಾಸದಲ್ಲಿ ಪೊಲೀಸರು ಶೋಧನೆ ನಡೆಸುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ. ನನ್ನ ಮನೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದರು.
ತಮ್ಮ ಹೋರಾಟ ಯಾರನ್ನೂ ವೈಯಕ್ತಿಕವಾಗಿ ಅವಮಾನಿಸುವ ಉದ್ದೇಶ ಹೊಂದಿಲ್ಲ. ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ನಡೆಯುತ್ತಿದೆ ಎನ್ನಲಾದ ಬ್ಲ್ಯಾಕ್‌ಮೇಲ್ ಜಾಲವನ್ನು ಬಯಲಿಗೆಳೆದು ಕರ್ನಾಟಕದ ಘನತೆಯನ್ನು ಕಾಪಾಡುವುದೇ ತಮ್ಮ ಉದ್ದೇಶ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.