ವಾರಾಣಸಿ, ನ. 2: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ದೇಶಾದ್ಯಂತ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ ಚುನಾವಣಾ ಆಯೋಗದ ಪರ ಬಿಜೆಪಿ ಬ್ಯಾಟಿಂಗ್ ಆರಂಭಿಸಿದೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವುದನ್ನು ಮತಗಳ್ಳತನ ಎಂದು ಬಿಂಬಿಸುವ ಮೂಲಕ ಪ್ರತಿಪಕ್ಷಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಪುರಿ ಸಂಸದ ಸಂಬಿತ್ ಪಾತ್ರ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ನಕಲಿ ನೋಂದಣಿ ಹೊಂದಿರುವವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಮತಗಳ್ಳತನವಲ್ಲ. ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸುವುದು ಚುನಾವಣಾ ಆಯೋಗದ ಜವಾಬ್ದಾರಿ. ಈ ಹಿಂದೆಯೂ ಇಂತಹ ಪರಿಷ್ಕರಣೆಗಳು ನಡೆದಿವೆ ಎಂದು ಆಯೋಗದ ಕ್ರಮವನ್ನು ಸಮರ್ಥಿಸಿಕೊಂಡರು.
13 ಕೋಟಿ ಮತಗಳನ್ನು ಕಳವು ಮಾಡಲಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪವನ್ನು ತಳ್ಳಿಹಾಕಿದ ಪಾತ್ರ, ಅರ್ಹ ಮತದಾರರ ಹೆಸರು ಕೈಬಿಡಲ್ಪಟ್ಟಿದ್ದರೆ ನಿಗದಿತ ಪ್ರಕ್ರಿಯೆಯ ಮೂಲಕ ಮರುಸೇರ್ಪಡೆ ಮಾಡಿಸಿಕೊಳ್ಳಲು ಅವಕಾಶವಿದೆ. ವಿಳಾಸ ಬದಲಾಯಿಸಿದವರೂ ಹೊಸ ವಿಳಾಸದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಚುನಾವಣಾ ಆಯೋಗದ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳೂ ತಮ್ಮ ಬೂತ್ ಮಟ್ಟದ ಏಜೆಂಟರ ಮೂಲಕ ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದು. ಆದರೆ, ಪ್ರತಿಪಕ್ಷಗಳು ಈ ಅವಕಾಶ ಬಳಸಿಕೊಳ್ಳುವ ಬದಲು ಆಯೋಗದ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಪಶ್ಚಿಮ ಬಂಗಾಳದ ಬೆಳವಣಿಗೆಗಳನ್ನು ಪ್ರಸ್ತಾಪಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪಗಳ ನಡುವೆಯೂ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹೊಸ ಯುವ ಮತದಾರರ ಹೆಸರುಗಳನ್ನೂ ಪಟ್ಟಿಗೆ ಸೇರಿಸಲಾಗುತ್ತಿದೆ. ಹೀಗಿರುವಾಗ ಎಸ್‌ಐಆರ್ ಮೂಲಕ ಮತದಾನದ ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂಬ ಆರೋಪ ನಿರಾಧಾರ ಎಂದು ವಾದಿಸಿದರು.
ಪಶ್ಚಿಮ ಬಂಗಾಳದಲ್ಲಿ ಅಕ್ರಮ ಒಳನುಸುಳುವಿಕೆ ಹಾಗೂ ಅನರ್ಹ ವ್ಯಕ್ತಿಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ ಅವರು, ಭಾರತದ ಚುನಾವಣೆಯಲ್ಲಿ ಮತದಾನದ ಹಕ್ಕು ಭಾರತೀಯ ನಾಗರಿಕರಿಗೆ ಮಾತ್ರ ಇರಬೇಕು ಎಂದು ಪ್ರತಿಪಾದಿಸಿದರು.
ಚುನಾವಣಾ ಸೋಲಿಗೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಹೊಣೆ ಮಾಡುವ ಬದಲು ಪ್ರತಿಪಕ್ಷಗಳು ತಮ್ಮ ರಾಜಕೀಯ ಕಾರ್ಯವೈಖರಿಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಎಸ್‌ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಅಪಾಯವಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವಾಗಲೇ, ಚುನಾವಣಾ ಆಯೋಗದ ಕ್ರಮಗಳನ್ನು ಬಿಜೆಪಿ ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಪರ ಆಡಳಿತಾರೂಢ ಪಕ್ಷವೇ ವಾದಕ್ಕಿಳಿದಿರುವುದು ಈ ವಿವಾದಕ್ಕೆ ಹೊಸ ಆಯಾಮ ನೀಡಿದೆ.