ಬೆಳಗಾವಿ, ಸೆ. 24 : (ಸಮದರ್ಶಿ ಸುದ್ದಿ) - ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕು, ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸಬೇಕು ಹಾಗೂ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಮಾರಾಟದ ಮೇಲಿರುವ ನಿರ್ಬಂಧಗಳನ್ನು ಸಡಿಲಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.29ರಂದು ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಚೂನಪ್ಪ ಪೂಜೇರಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಯುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೂ ಸಕ್ಕರೆ ಮತ್ತು ಕಬ್ಬಿನ ದರದಲ್ಲಿ ಅದಕ್ಕೆ ಅನುಗುಣವಾದ ಪರಿಷ್ಕರಣೆ ಆಗಿಲ್ಲ ಎಂದು ಹೇಳಿದರು. 2019ರಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಕೆ.ಜಿಗೆ ₹31ರಲ್ಲೇ ಉಳಿದಿದ್ದು, ಈ ಅವಧಿಯಲ್ಲಿ ಕಬ್ಬು ಉತ್ಪಾದನೆಯ ವೆಚ್ಚ ಹಲವು ಪಟ್ಟು ಏರಿಕೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ಈ ಹಿನ್ನೆಲೆಯಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಕೆ.ಜಿಗೆ ₹60ಕ್ಕೆ ಹೆಚ್ಚಿಸಬೇಕು. ವಾಣಿಜ್ಯ ಬಳಕೆಗೆ ಮಾರಾಟವಾಗುವ ಸಕ್ಕರೆಗೆ ಕೆ.ಜಿಗೆ ₹100 ದರ ನಿಗದಿಪಡಿಸಬೇಕು. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚಿನ ಆದಾಯ ದೊರೆತು, ಅದರ ಪ್ರಯೋಜನ ಕಬ್ಬು ಬೆಳೆಗಾರರಿಗೂ ತಲುಪಲು ಸಾಧ್ಯವಾಗುತ್ತದೆ ಎಂದು ಪೂಜೇರಿ ಹೇಳಿದರು.
ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸುವುದು ಈ ಬಾರಿಯ ಹೋರಾಟದ ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆಯೊಂದಿಗೆ ರಾಜ್ಯದ ವಿವಿಧ ಭಾಗಗಳ ರೈತರು ಸೆ.29ರಂದು ಹುಬ್ಬಳ್ಳಿಯಲ್ಲಿ ಸೇರಲಿದ್ದು, ದೊಡ್ಡ ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಎಥೆನಾಲ್ ಪೈಕಿ ಶೇ 30ರಷ್ಟು ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಪೂಜೇರಿ ಹೇಳಿದರು. ಇತರ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೂ ಉತ್ಪಾದನೆಯ ಶೇ 100ರಷ್ಟು ಎಥೆನಾಲ್ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಇದರಿಂದ ಕಾರ್ಖಾನೆಗಳ ಆದಾಯ ಹೆಚ್ಚುವುದರೊಂದಿಗೆ ರೈತರಿಗೆ ಉತ್ತಮ ಕಬ್ಬಿನ ದರ ನೀಡಲು ಅನುಕೂಲವಾಗಲಿದೆ ಎಂದು ಪ್ರತಿಪಾದಿಸಿದರು.
ಕಳೆದ ವರ್ಷ ನಡೆದ ರೈತರ ಹೋರಾಟದ ಪರಿಣಾಮ ಪ್ರತಿ ಟನ್ ಕಬ್ಬಿಗೆ ₹3,300 ದರ ದೊರಕಿತ್ತು. ಆದರೆ ಕೆಲವು ಸಕ್ಕರೆ ಕಾರ್ಖಾನೆಗಳು ಈ ಮೊತ್ತವನ್ನೂ ಸಂಪೂರ್ಣವಾಗಿ ಪಾವತಿಸದೆ ರೈತರಿಗೆ ಬಾಕಿ ಉಳಿಸಿಕೊಂಡಿವೆ ಎಂದು ಆರೋಪಿಸಿದ ಅವರು, ಬಾಕಿ ಹಣವನ್ನು ತಕ್ಷಣ ಪಾವತಿಸಬೇಕು. ಇಲ್ಲವಾದರೆ ಸಂಬಂಧಿಸಿದ ಕಾರ್ಖಾನೆಗಳ ವಿರುದ್ಧ ರೈತರು ಮತ್ತೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಬ್ಬಿನ ತೂಕದಲ್ಲಿಯೂ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ದೂರುಗಳು ನಿರಂತರವಾಗಿ ಕೇಳಿಬರುತ್ತಿವೆ. ಕೆಲವು ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ವಿಷಯದಲ್ಲಿ ರೈತರಿಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿದ ಪೂಜೇರಿ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎಪಿಎಂಸಿ ಮೂಲಕ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.
ವಿಬಿ–ಜಿರಾಮ್‌ಜಿ ಯೋಜನೆಯ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಕೃಷಿ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಬೇಡಿಕೆಯನ್ನೂ ರೈತ ಸಂಘ ಮುಂದಿಟ್ಟಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ರಾಜು ಶೆಟ್ಟಿ, ಕಬ್ಬು ಬೆಳೆಗಾರರ ಈ ಹೋರಾಟ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ರಾಷ್ಟ್ರಮಟ್ಟದ ಹೋರಾಟವಾಗಿದ್ದು, ಮಹಾರಾಷ್ಟ್ರದ ರೈತರೂ ಸೆ.29ರ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರತಿ ಟನ್ ಕಬ್ಬಿಗೆ ₹5,500 ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ಏಕೆ ಒತ್ತಡ ಹೇರುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ರೈತರ ನ್ಯಾಯಸಮ್ಮತ ಬೇಡಿಕೆಗಳಿಗೆ ಕಾರ್ಖಾನೆಗಳೂ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಹೋರಾಟಕ್ಕೆ ಸಕ್ಕರೆ ಕಾರ್ಖಾನೆಗಳು ಕೈಜೋಡಿಸದಿದ್ದರೆ, ಮುಂಬರುವ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗಳ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಜು ಶೆಟ್ಟಿ ಎಚ್ಚರಿಸಿದರು.