ಗೆದ್ದಾಡ, ನ. 17: ಆಂಧ್ರಪ್ರದೇಶದ ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮ ಜಿಲ್ಲೆಯ ಗೆದ್ದಾಡ ಗ್ರಾಮದಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್ಜಿಸಿ) ಬಾವಿಯಲ್ಲಿ ಮಂಗಳವಾರ ಮುಂಜಾನೆ ಭಾರಿ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 800 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 216ರ ಸಮೀಪದ ಅನಿಲ ಬಾವಿಯಲ್ಲಿ ಮುಂಜಾನೆ 5 ಗಂಟೆಗೆ ಕೆಲಸ ನಡೆಯುತ್ತಿದ್ದಾಗ ಸೋರಿಕೆ ಆರಂಭವಾಗಿದೆ. ಬಾವಿಯ 1 ಕಿ.ಮೀ. ವ್ಯಾಪ್ತಿಯಲ್ಲಿರುವ 400ರಿಂದ 500 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಸಂಭವಿಸಿದ ನಾಲ್ಕನೇ ಅನಿಲ ಸೋರಿಕೆ ಘಟನೆ ಇದಾಗಿದೆ.
ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಒಎನ್ಜಿಸಿ ರಾಜಮಂಡ್ರಿ ಘಟಕವು ತುರ್ತು ವಿಪತ್ತು ನಿರ್ವಹಣಾ ಕಾರ್ಯಾಚರಣೆ ಆರಂಭಿಸಿತು. ಬೆಂಕಿ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ 216ರಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗಗಳಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಅನಿಲ ಸೋರಿಕೆಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಲಾಗಿದೆ ಎಂದು ಒಎನ್ಜಿಸಿ ತಿಳಿಸಿದೆ. ಸ್ಥಳಾಂತರಗೊಂಡ ಜನರಿಗೆ ಜಿಲ್ಲಾಡಳಿತ ಊಟದ ವ್ಯವಸ್ಥೆ ಕಲ್ಪಿಸಿದೆ.