ರಾಯಚೂರು, ಅ. 17 (ಸಮದರ್ಶಿ ಸುದ್ದಿ): ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಶನಿವಾರ ಈರುಳ್ಳಿ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಗಾಯಗೊಂಡ ಚಾಲಕ ಹಾಗೂ ಕ್ಲೀನರ್ಗೆ ನೆರವಾಗುವ ಬದಲು ಸ್ಥಳಕ್ಕೆ ಧಾವಿಸಿದ ಜನರು ಈರುಳ್ಳಿ ಚೀಲಗಳನ್ನು ಹೊತ್ತೊಯ್ದ ಘಟನೆ ನಡೆದಿದೆ.
ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಪಲ್ಟಿಯಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದ ಜನರು ಗಾಯಾಳುಗಳ ನೆರವಿಗೆ ಧಾವಿಸುವ ಬದಲು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಈರುಳ್ಳಿ ಚೀಲಗಳನ್ನು ದೋಚಲು ಮುಗಿಬಿದ್ದಿದ್ದಾರೆ.
ಕೇವಲ 15 ನಿಮಿಷಗಳಲ್ಲಿ ಲಾರಿಯಲ್ಲಿದ್ದ ಈರುಳ್ಳಿಯನ್ನು ಜನರು ಹೊತ್ತೊಯ್ದಿದ್ದಾರೆ ಎಂದು ವರದಿಯಾಗಿದೆ. ಕೆಲವರು ಚೀಲಗಳ ಸಮೇತ ಈರುಳ್ಳಿ ಸಾಗಿಸಿದರೆ, ಇನ್ನು ಕೆಲವರು ಸಿಕ್ಕಷ್ಟು ಈರುಳ್ಳಿಯನ್ನು ಸಂಗ್ರಹಿಸಿಕೊಂಡು ತೆರಳಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರ ಪ್ರಾಣ ಉಳಿಸಲು ಮುಂದಾಗಬೇಕಾದ ಜನರು, ಈರುಳ್ಳಿ ದೋಚಲು ಮುಗಿಬಿದ್ದಿರುವುದು ಸಮಾಜದಲ್ಲಿ ಮಾನವೀಯ ಮೌಲ್ಯಗಳು ಎಷ್ಟರಮಟ್ಟಿಗೆ ಕುಸಿಯುತ್ತಿವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಕನಿಷ್ಠ ಮಾನವೀಯತೆಯನ್ನೂ ಮರೆತಿರುವ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.