ಹೊಸದಿಲ್ಲಿ, ಅ. 17: ಸೌದಿ ಅರೇಬಿಯಾದಲ್ಲಿ ವಿಮಾನ ಸಂಚಾರ ವ್ಯತ್ಯಯದಿಂದ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಭಾರತೀಯ ಉಮ್ರಾ ಯಾತ್ರಿಕರಿಗೆ ತುರ್ತು ನೆರವು ಒದಗಿಸಿ, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳುವಂತೆ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿರುವ ಅವರು, ಇತ್ತೀಚಿನ ವೈಮಾನಿಕ ದಾಳಿಗಳು ಮತ್ತು ವಿಮಾನಯಾನ ಸೇವೆಗಳ ಸ್ಥಗಿತದಿಂದಾಗಿ ಭಾರತೀಯ ಯಾತ್ರಿಕರು ನಿಗದಿತ ಅವಧಿಗಿಂತ ಹೆಚ್ಚು ದಿನ ಸೌದಿ ಅರೇಬಿಯಾದಲ್ಲೇ ಉಳಿಯುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಜಿದ್ದಾ, ದಮ್ಮಾಮ್ ಮತ್ತು ಮದೀನಾ ವಿಮಾನ ನಿಲ್ದಾಣಗಳಲ್ಲಿಯೂ ಭಾಗಶಃ ವ್ಯತ್ಯಯ ಉಂಟಾಗಿದೆ. ಸೌದಿಯಾ ಮತ್ತು ಫ್ಲೈನಾಸ್ ವಿಮಾನಯಾನ ಸಂಸ್ಥೆಗಳು ಸೀಮಿತ ವೇಳಾಪಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳು ರದ್ದಾಗಿರುವುದರಿಂದ ಅನೇಕ ಯಾತ್ರಿಕರ ವಾಪಸಾತಿ ಪ್ರಯಾಣ ವಿಳಂಬವಾಗಿದೆ. ಕೆಲವರ ಟಿಕೆಟ್ಗಳ ಅವಧಿ ಮುಗಿದಿದ್ದು, ಹೆಚ್ಚುವರಿ ವಸತಿ ಮತ್ತು ಆಹಾರ ವೆಚ್ಚ ಭರಿಸಲು ಸಾಧ್ಯವಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವವರಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿದೆ. ಖಾಸಗಿ ಉಮ್ರಾ ಪ್ರವಾಸ ನಿರ್ವಾಹಕರು ಆರ್ಥಿಕ ತೊಂದರೆ ಎದುರಿಸುತ್ತಿರುವುದರಿಂದ ಯಾತ್ರಿಕರೊಂದಿಗೆ ಸಮರ್ಪಕ ಸಂಪರ್ಕ ಮತ್ತು ಸಮನ್ವಯ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವೀಸಾ ಅವಧಿ ಮುಗಿದು ಕಾನೂನು ಸಮಸ್ಯೆಗಳು ಎದುರಾಗುವ ಆತಂಕವೂ ಇದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿರುವ ಯಾತ್ರಿಕರ ಕುಟುಂಬಗಳು ತೀವ್ರ ಆತಂಕದಲ್ಲಿವೆ. ಮಕ್ಕಾ ಮತ್ತು ಜಿದ್ದಾದಲ್ಲಿ ಭಾರತೀಯ ಅಧಿಕಾರಿಗಳು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದ್ದರೂ, ಸ್ಥಳೀಯ ಮಟ್ಟದಲ್ಲಿ ನೆರವು ಮತ್ತು ಮಾಹಿತಿ ಪಡೆಯಲು ಯಾತ್ರಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಹೇಳಿದ್ದಾರೆ.
ತುರ್ತು ನೆರವು ಮತ್ತು ಸುರಕ್ಷಿತ ವಾಪಸಾತಿಗೆ ಒತ್ತಾಯ
ಸಂಕಷ್ಟದಲ್ಲಿರುವ ಯಾತ್ರಿಕರು ಹಾಗೂ ಖಾಸಗಿ ಪ್ರವಾಸ ನಿರ್ವಾಹಕರನ್ನು ತಕ್ಷಣ ಸಂಪರ್ಕಿಸಿ, ಸುರಕ್ಷಿತ ವಸತಿ, ಆಹಾರ, ವೈದ್ಯಕೀಯ ಚಿಕಿತ್ಸೆ ಮತ್ತು ಅಗತ್ಯ ಕಾನೂನು ನೆರವು ಒದಗಿಸಬೇಕು. ಮಾನವೀಯ ನೆಲೆಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಿ ಯಾತ್ರಿಕರನ್ನು ಆದಷ್ಟು ಬೇಗ ಭಾರತಕ್ಕೆ ಕರೆತರಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂಬಂಧ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಜಿದ್ದಾದ ಭಾರತೀಯ ಕಾನ್ಸುಲೇಟ್ ಜನರಲ್ಗೆ ತಕ್ಷಣ ನಿರ್ದೇಶನ ನೀಡಬೇಕು. ಯಾತ್ರಿಕರ ಸುರಕ್ಷತೆ ಮತ್ತು ವಾಪಸಾತಿಯಲ್ಲಿ ನಿರ್ಲಕ್ಷ್ಯ ತೋರಿರುವ ಖಾಸಗಿ ಪ್ರವಾಸ ನಿರ್ವಾಹಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಜ್ ಮತ್ತು ಉಮ್ರಾ ಯಾತ್ರೆಗಳಿಗೆ ಸಂಬಂಧಿಸಿದ ಸೌಲಭ್ಯಗಳು ಹಾಗೂ ಖಾಸಗಿ ಪ್ರವಾಸ ನಿರ್ವಾಹಕರ ನಿಯಂತ್ರಣದ ವಿಚಾರದಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವೂ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕೋರಿದ್ದಾರೆ.
ರಾಜ್ಯ ಹಜ್ ಸಮಿತಿಗಳಿಂದಲೂ ನೆರವು ಒದಗಿಸಲು ಮನವಿ
ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಯಾತ್ರಿಕರ ಕುಟುಂಬಗಳಿಗೆ ನೆರವಾಗುವಂತೆ ರಾಜ್ಯ ಹಜ್ ಸಮಿತಿಗಳಿಗೆ ಸೂಚನೆ ನೀಡಬೇಕು. ಅಗತ್ಯವಿದ್ದರೆ ಕಲ್ಯಾಣ ನಿಧಿಯಿಂದ ತುರ್ತು ಆರ್ಥಿಕ ಸಹಾಯ ಒದಗಿಸುವುದನ್ನೂ ಪರಿಗಣಿಸಬೇಕು ಎಂದು ಮನ್ಸೂರ್ ಅಲಿ ಖಾನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.