ಜಕಾರ್ತ, ಅ. 17: ಇಂಡೋನೇಷ್ಯಾದ ಪಶ್ಚಿಮ ಸುಮಾತ್ರ ಪ್ರಾಂತ್ಯದ ರೋಬೊ ಹರೌ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಎತ್ತರದಿಂದ ಕೆಳಗೆ ಬಿದ್ದ 25 ವರ್ಷದ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಯುವತಿಯನ್ನು ರಕ್ಷಿಸಲು ಸ್ನೇಹಿತರು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತ ಯುವತಿಯನ್ನು ಪಡಾಂಗ್ ಪರಿಯಾಮನ್ ಪ್ರದೇಶದ ನಿವಾಸಿ ವಿಂಡಿ ರಹ್ಮಾ (25) ಎಂದು ಗುರುತಿಸಲಾಗಿದೆ. ಅಕ್ಟೋಬರ್ 15ರಂದು ಸ್ನೇಹಿತರೊಂದಿಗೆ ಲಿಮಾಪುಲುಹ್ ಕೊಟಾ ಪ್ರದೇಶದಲ್ಲಿರುವ ರೋಬೊ ಜಲಪಾತಕ್ಕೆ ತೆರಳಿದ್ದ ಅವರು, ಜಲಪಾತದ ಮೇಲ್ಭಾಗದಲ್ಲಿ ಮಲಗಿ ಸ್ನಾನ ಮಾಡುತ್ತಿದ್ದಾಗ ನೀರಿನ ರಭಸಕ್ಕೆ ಜಾರಿಕೊಂಡು ಕೆಳಗೆ ಬಿದ್ದಿದ್ದಾರೆ.
ಈ ವೇಳೆ ಸಮೀಪದಲ್ಲಿದ್ದ ಸ್ನೇಹಿತರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ನೀರಿನ ತೀವ್ರ ಸೆಳೆತದಿಂದಾಗಿ ಸಾಧ್ಯವಾಗಲಿಲ್ಲ. ಯುವತಿ ನೀರಿನಲ್ಲಿ ಕೊಚ್ಚಿಹೋದ ಹಿನ್ನೆಲೆಯಲ್ಲಿ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.
ಮಧ್ಯಾಹ್ನ ಸುಮಾರು 3.45ಕ್ಕೆ ಘಟನೆ ಸಂಭವಿಸಿದ್ದು, ಸಂಜೆ 5.27ಕ್ಕೆ ರಕ್ಷಣಾ ಇಲಾಖೆಗೆ ಮಾಹಿತಿ ತಲುಪಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಶೋಧ ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿದವು.
ಸುಮಾರು 570 ಮೀಟರ್ ವ್ಯಾಪ್ತಿಯಲ್ಲಿ ಶೋಧ ನಡೆಸಿದ ಸಿಬ್ಬಂದಿಗೆ ಅಕ್ಟೋಬರ್ 16ರಂದು ಬೆಳಗ್ಗೆ 10.45ಕ್ಕೆ ಯುವತಿಯ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಹೊರತೆಗೆಯಲಾಯಿತು ಎಂದು ಪಡಾಂಗ್ ಶೋಧ ಮತ್ತು ರಕ್ಷಣಾ ಕಚೇರಿಯ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದ್ದಾರೆ.
ಯುವತಿ ಜಲಪಾತದಲ್ಲಿ ಜಾರಿಕೊಂಡು ಹೋಗುವ ಹಾಗೂ ಸ್ನೇಹಿತರು ರಕ್ಷಣೆಗೆ ಪ್ರಯತ್ನಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೋ ವೀಕ್ಷಿಸಿದ ಅನೇಕರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಜಲಪಾತಗಳಂತಹ ಅಪಾಯಕಾರಿ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.