LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
Local News

ಕಿತ್ತೂರಿನಲ್ಲಿ ಮೊಳಗಿದ ರೈತ ಹೋರಾಟದ ಕಹಳೆ

ಚನ್ನಮ್ಮನ ಕಿತ್ತೂರು, ಅ. 17 (ಸಮದರ್ಶಿ ಸುದ್ದಿ): ಕಬ್ಬಿಗೆ ಲಾಭದಾಯಕ ಬೆಲೆ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿರುವ ‘ಹುಬ್ಬಳ್ಳಿ ಚಲೊ’ ಪಾದಯಾತ್ರೆ ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಐತಿಹಾಸಿಕ ಚನ್ನಮ್ಮನ ಕಿತ್ತೂರಿಗೆ ಪ್ರವೇಶಿಸಿತು. ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಅಪಾರ ಸಂಖ್ಯೆಯ ರೈತರು ಜಮಾಯಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಕಿತ್ತೂರಿಗೆ ಆಗಮಿಸಿದರು. ಎಂ.ಕೆ. ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ರಾಜ್ಯಮಟ್ಟದ ರೈತ ಮುಖಂಡರ ಸಭೆಯನ್ನು ಕಿತ್ತೂರಿನಲ್ಲೇ ನಡೆಸಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿಯೂ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಐತಿಹಾಸಿಕ ರಾಣಿ ಚನ್ನಮ್ಮ ವೃತ್ತದಲ್ಲಿ ಹಸಿರು ಟವೆಲ್‌ಗಳನ್ನು ಬೀಸುತ್ತಾ ಜಮಾಯಿಸಿದ ರೈತರು, ರಾಣಿ ಚನ್ನಮ್ಮನಿಗೆ ಜಯಕಾರ ಹಾಕಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಾದಯಾತ್ರೆಯ ಮುಂಚೂಣಿಯಲ್ಲಿದ್ದ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಪ್ರತಿಭಟನಾನಿರತ ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕು, ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಕೆ.ಜಿ.ಗೆ ₹60ಕ್ಕೆ ಹೆಚ್ಚಿಸಬೇಕು ಹಾಗೂ ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್ ಅನ್ನು ಸಂಪೂರ್ಣವಾಗಿ ಖರೀದಿಸಬೇಕು ಎಂಬ ಮೂರು ಪ್ರಮುಖ ಬೇಡಿಕೆಗಳನ್ನು ರೈತರು ಮುಂದಿಟ್ಟಿದ್ದಾರೆ.

ಇದರೊಂದಿಗೆ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ₹1,000 ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ನೀಡಬೇಕು ಎಂಬ ಆಗ್ರಹವೂ ಪ್ರತಿಭಟನೆಯಲ್ಲಿ ಕೇಳಿಬಂತು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST