ಹೊಸದಿಲ್ಲಿ, ನ. 5: ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಅವಧಿಯ ಲೆಕ್ಕಾಚಾರ ಆರಂಭವಾಗುತ್ತದೆ. ಔಪಚಾರಿಕವಾಗಿ ಬಂಧನ ದಾಖಲಿಸಿದ ಸಮಯದಿಂದ ಅಲ್ಲ ಎಂದು ಸುಪ್ರೀಂ ಕೋರ್ಟ ಗುರುವಾರ ಮಹತ್ವದ ತೀರ್ಪು ನೀಡಿದೆ.
ಬಂಧಿತ ವ್ಯಕ್ತಿಯನ್ನು 24 ಗಂಟೆಗಳೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವುದು ಕಡ್ಡಾಯವಾಗಿದ್ದು, ಬಂಧನ ಮತ್ತು ವಶಕ್ಕೆ ಪಡೆಯುವಿಕೆಯ ನಡುವೆ ಕೃತಕ ವ್ಯತ್ಯಾಸ ಕಲ್ಪಿಸಿ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ನ್ಯಾಯಪೀಠವು, ಸಂವಿಧಾನದ 22(2)ನೇ ವಿಧಿಯ ಪ್ರಕಾರ ವ್ಯಕ್ತಿಯ ಸ್ವಾತಂತ್ರ್ಯವನ್ನು ವಾಸ್ತವವಾಗಿ ನಿರ್ಬಂಧಿಸಿದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭವಾಗುತ್ತದೆ ಎಂದು ತಿಳಿಸಿದೆ.
ಪೊಲೀಸರು ವಿಚಾರಣೆ ಅಥವಾ ತನಿಖೆಯ ನೆಪದಲ್ಲಿ ವ್ಯಕ್ತಿಯನ್ನು ವಶದಲ್ಲಿಟ್ಟುಕೊಂಡು, ಹಲವು ಗಂಟೆಗಳ ನಂತರ ಔಪಚಾರಿಕ ಬಂಧನ ದಾಖಲಿಸುವ ಮೂಲಕ ಸಾಂವಿಧಾನಿಕ ನಿಯಮವನ್ನು ತಪ್ಪಿಸಿಕೊಳ್ಳಲು ಅವಕಾಶವಿಲ್ಲ. ಬಂಧನ ನಡೆದ ಸ್ಥಳದಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಲುಪಲು ಅಗತ್ಯವಿರುವ ಪ್ರಯಾಣದ ಅವಧಿಯನ್ನು ಮಾತ್ರ 24 ಗಂಟೆಗಳ ಲೆಕ್ಕದಿಂದ ಹೊರಗಿಡಬಹುದು ಎಂದು ನ್ಯಾಯಪೀಠ ಹೇಳಿದೆ.
ಮಾದಕವಸ್ತು ನಿಯಂತ್ರಣ ಕಾಯ್ದೆಯಡಿ ದಾಖಲಾದ ಪ್ರಕರಣವೊಂದರಲ್ಲಿ ತ್ರಿಪುರ ಹೈಕೋರ್ಟ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿದೆ.
2025ರ ಸೆಪ್ಟೆಂಬರ್ 29ರಂದು ಮಧ್ಯಾಹ್ನ 2 ಗಂಟೆಗೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಮರುದಿನ ಬೆಳಿಗ್ಗೆ 11 ಗಂಟೆಗೆ ಅಧಿಕೃತವಾಗಿ ಬಂಧನ ದಾಖಲಿಸಿದ್ದರು. ಈ ನಡುವಿನ ಅವಧಿಯನ್ನು ಬಂಧನದ ಲೆಕ್ಕಾಚಾರದಿಂದ ಹೊರಗಿಟ್ಟಿರುವುದು ಸಂವಿಧಾನದ 22(2)ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಗಡುವು ಮೀರಿದರೆ ಬಿಡುಗಡೆ: ಬಂಧಿತರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಾಗ ಅವರನ್ನು ವಶಕ್ಕೆ ಪಡೆದ ನಿಖರ ದಿನಾಂಕ ಮತ್ತು ಸಮಯವನ್ನು ಪರಿಶೀಲಿಸಬೇಕು. 24 ಗಂಟೆಗಳ ಗಡುವು ಮೀರಿದ್ದರೆ ಸಂಬಂಧಪಟ್ಟ ವ್ಯಕ್ತಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ ನಿರ್ದೇಶಿಸಿದೆ.
24 ಗಂಟೆಗಳ ಅವಧಿಯೊಳಗೇ ಹಾಜರುಪಡಿಸಿದ್ದರೂ, ಬಂಧನವು ಸಮಂಜಸವಾದ ಸಮಯವನ್ನು ಮೀರಿದೆಯೇ ಎಂಬುದನ್ನು ಮ್ಯಾಜಿಸ್ಟ್ರೇಟ್ ಪರಿಶೀಲಿಸಬೇಕು. ಅಗತ್ಯವಿದ್ದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನಿರಾಕರಿಸಬಹುದು ಎಂದು ತಿಳಿಸಿದೆ.
ಬಂಧನಕ್ಕೂ ಮುನ್ನ ವಶದಲ್ಲಿದ್ದ ಅವಧಿಯನ್ನು ಲೆಕ್ಕಾಚಾರದಿಂದ ಹೊರಗಿಡಲು ಅವಕಾಶ ನೀಡಿದ್ದ ಕೆಲವು ಹೈಕೋರ್ಟಗಳ ಹಿಂದಿನ ತೀರ್ಪುಗಳನ್ನು ನ್ಯಾಯಪೀಠ ತಿರಸ್ಕರಿಸಿದೆ.
ಪೊಲೀಸ್ ವಶದಲ್ಲಿನ ಹಿಂಸಾಚಾರ ಮತ್ತು ಅಕ್ರಮ ಬಂಧನಗಳನ್ನು ತಡೆಯಲು ಪರಿಣಾಮಕಾರಿ ನ್ಯಾಯಾಂಗ ಮೇಲ್ವಿಚಾರಣೆ ಅತ್ಯಗತ್ಯ ಎಂದು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ, ಪ್ರಕರಣದ ನಾಲ್ವರು ಆರೋಪಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.