ಇಂಡಿ, ಆಗಸ್ಟ್ 7: ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬೀದಿನಾಯಿಗಳ ದಾಳಿಗೆ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪಟ್ಟಣದ ಗುತ್ತೇದಾರ್ ಲೇಔಟ್‌ನಲ್ಲಿ 9 ವರ್ಷದ ಬಾಲಕಿ ಪ್ರೇರಣಾ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದು, ಮುಖ, ಕಣ್ಣು ಹಾಗೂ ಕೈ ಭಾಗಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ.
ಇದರ ಬೆನ್ನಲ್ಲೇ ಕರೀಂನಗರ ಪ್ರದೇಶದಲ್ಲೂ ಬಾಲಕ ತೈಮೂರ್ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ. ಸ್ಥಳೀಯರು ತಕ್ಷಣ ಇಬ್ಬರು ಮಕ್ಕಳನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.