LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಮಹಿಳೆಯರ ಮೇಲೆ ಪೊಲೀಸರಿಂದ ಲೈಂಗಿಕ ದೌರ್ಜನ್ಯ ಆರೋಪ: ಪೊಲೀಸ್ ಕೇಂದ್ರ ಕಚೇರಿಗೆ ಮೆರವಣಿಗೆ

ಹೊಸದಿಲ್ಲಿ, ಅ. 17: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಮಹಿಳೆಯರು ಹಾಗೂ ಟ್ರಾನ್ಸ್‌ಜೆಂಡರ್ ಪ್ರತಿಭಟನಾಕಾರರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಎಸಗಿದ ಆರೋಪ ಎದುರಿಸುತ್ತಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಮಹಿಳಾ ಸಂಘಟನೆಗಳು ಶನಿವಾರ ದೆಹಲಿ ಪೊಲೀಸ್ ಕೇಂದ್ರ ಕಚೇರಿಗೆ ಮೆರವಣಿಗೆ ನಡೆಸಿದವು.

ಗುರುದ್ವಾರ ಬಾಂಗ್ಲಾ ಸಾಹಿಬ್ ಬಳಿ ಜಮಾಯಿಸಿದ ಮಹಿಳಾ ಕಾರ್ಯಕರ್ತರು ಭಿತ್ತಿಪತ್ರಗಳು, ಬ್ಯಾನರ್‌ಗಳನ್ನು ಹಿಡಿದು ಪೊಲೀಸ್ ಕೇಂದ್ರ ಕಚೇರಿಯತ್ತ ಮೆರವಣಿಗೆ ನಡೆಸಿದರು. ಪೊಲೀಸ್ ಸಿಬ್ಬಂದಿಯಿಂದ ನಡೆಯುತ್ತಿರುವುದಾಗಿ ಆರೋಪಿಸಲಾದ ಲೈಂಗಿಕ ಹಾಗೂ ಲಿಂಗಾಧಾರಿತ ಹಿಂಸಾಚಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಚುನಾವಣಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೂ ಒತ್ತಾಯಿಸಿದರು.

ಪ್ರತಿಭಟನಾಕಾರರ ಮೇಲಿನ ದೌರ್ಜನ್ಯಗಳಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು. ಆರೋಪಿತ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ, ತಪ್ಪಿತಸ್ಥರೆಂದು ಸಾಬೀತಾದವರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜುಲೈ 20ರಿಂದ ನಡೆದ ಪೊಲೀಸ್ ಕಾರ್ಯಾಚರಣೆಗಳ ಸಂದರ್ಭದಲ್ಲಿ ಮಹಿಳೆಯರು, ಟ್ರಾನ್ಸ್‌ಜೆಂಡರ್ ಹಾಗೂ ಲಿಂಗ ವೈವಿಧ್ಯಮಯ ಪ್ರತಿಭಟನಾಕಾರರ ಮೇಲೆ ಲೈಂಗಿಕ ಕಿರುಕುಳ ಮತ್ತು ದೈಹಿಕ ಹಿಂಸೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊಗಳು, ಛಾಯಾಚಿತ್ರಗಳು ಹಾಗೂ ಸಂತ್ರಸ್ತರ ಹೇಳಿಕೆಗಳು ಲಭ್ಯವಿವೆ ಎಂದು ಸಂಘಟನೆಗಳು ಆರೋಪಿಸಿವೆ. ಅಕ್ಟೋಬರ್ 2ರಿಂದ ಇಂತಹ ಘಟನೆಗಳ ವರದಿಗಳು ಹೆಚ್ಚಾಗಿವೆ ಎಂದು ತಿಳಿಸಿವೆ.

ಪುರುಷ ಪೊಲೀಸ್ ಸಿಬ್ಬಂದಿ ಮಹಿಳಾ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳಿವೆ. ಪ್ರತಿಭಟನಾಕಾರರನ್ನು ಕರೆದೊಯ್ಯುವ ಪೊಲೀಸ್ ಬಸ್‌ಗಳು ಹಾಗೂ ಬಂಧನ ಕೇಂದ್ರಗಳಲ್ಲಿಯೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಂಘಟನೆಗಳು ದೂರಿವೆ.

‘ಮಹಿಳೆಯರ ಧ್ವನಿಯನ್ನು ಅಡಗಿಸುವ ಉದ್ದೇಶದಿಂದ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಮಹಿಳೆಯರನ್ನು ಸಾರ್ವಜನಿಕ ಹಾಗೂ ರಾಜಕೀಯ ಜೀವನದಿಂದ ದೂರವಿಡುವ ಪ್ರಯತ್ನವಾಗಿದೆ’ ಎಂದು ಸಂಘಟನೆಗಳು ಆರೋಪಿಸಿವೆ.

ಪ್ರತಿಭಟನಾಕಾರರು ಜಾತಿ, ಕೋಮು ಹಾಗೂ ಲಿಂಗಾಧಾರಿತ ನಿಂದನೆಗೂ ಒಳಗಾಗಿದ್ದಾರೆ. ಇಂತಹ ದುರ್ವರ್ತನೆಯನ್ನು ತಡೆಯಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿವೆ.

ಮಹಿಳೆಯರು ಮತ್ತು ಲಿಂಗ ವೈವಿಧ್ಯಮಯ ಸಮುದಾಯದವರು ಯಾವುದೇ ಭಯವಿಲ್ಲದೆ ಸಾರ್ವಜನಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಹಕ್ಕನ್ನು ರಕ್ಷಿಸಬೇಕು. ದೌರ್ಜನ್ಯದ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿವೆ.

ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ (ಎಐಡಿಡಬ್ಲ್ಯುಎ), ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು), ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ (ಎಐಪಿಡಬ್ಲ್ಯುಎ), ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್), ಅಖಿಲ ಭಾರತ ಸ್ತ್ರೀವಾದಿ ಒಕ್ಕೂಟ (ಎಎಲ್‌ಐಎಫ್‌ಎ), ದುಡಿಯುವ ಮಹಿಳೆಯರ ಅಖಿಲ ಭಾರತ ಸಮನ್ವಯ ಸಮಿತಿ ಸೇರಿದಂತೆ ವಿವಿಧ ಮಹಿಳಾ ಹಾಗೂ ವಿದ್ಯಾರ್ಥಿ ಸಂಘಟನೆಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST