ಯುದ್ಧ ಮತ್ತು ರಾಜಕೀಯದಲ್ಲಿ ಸದಾ ಮೈಯೆಲ್ಲ ಕಣ್ಣಾಗಿ ಇರಬೇಕು ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಆಘಾಡಿ ಸರ್ಕಾರಕ್ಕೆ ಕುತ್ತು ಬಂದಾಗ, ಹಿರಿಯ ರಾಜಕಾರಣಿ ಶರದ ಪವಾರ ಅವರು ಒಂದೇ ಒಂದು ಪ್ರಶ್ನೆ ಕೇಳಿದ್ದರು. “ನಿಮ್ಮ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? “. ಈಗ ಸೂರತ್ ನ್ಯಾಯಾಲಯದ ತೀರ್ಪು ಬಂದ ಮೇಲೆ ಘಟಾನುಘಟಿ ವಕೀಲರೆಲ್ಲ ನ್ಯಾಯಾಲಯದ ವ್ಯಾಪ್ತಿ, ಬಿಜೆಪಿಯ ಜನ ನರಸಂಹಾರದ ಕರೆ ಕೊಟ್ಟರೂ ಏನೂ ಆಗುತ್ತಿಲ್ಲ ಮತ್ತಿತರ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಹಾಗಿದ್ದಲ್ಲಿ ನ್ಯಾಯಾಲಯದಲ್ಲಿ ಅದೇ ವಾದ ಮಂಡಿಸಿ ಇವರು ಏಕೆ ಗೆಲ್ಲಲಿಲ್ಲ? ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೆ ಏನು ಪ್ರಯೋಜನ?
ವಿರೋಧ ಪಕ್ಷ ಒಂದು ಸಂಗತಿ ನೆನಪಲ್ಲಿ ಇಟ್ಟುಕೊಳ್ಳಬೇಕಿತ್ತು. ಅವರ ಬಳಿ ಇರುವ ಸಂಸಾಧನಗಳಿಗಿಂತ ಹೆಚ್ಚಿನ ಸಂಸಾಧನಗಳು ಆಳುವವರ ಬಳಿ ಇರುತ್ತವೆ ಎಂದು. ಈಗ ಒಂದು ಸಣ್ಣ ಪ್ರಕ್ರಿಯೆ ಗಮನಿಸಿ. ಸೂರತ್ ನ್ಯಾಯಾಲಯದಲ್ಲಿ ಮಧ್ಯಾಹ್ನ ಎರಡು ಗಂಟೆಗೆ ತೀರ್ಪು ಪ್ರಕಟ ಆಯಿತು. ತೀರ್ಪು ನೂರಕ್ಕೂ ಹೆಚ್ಚು ಪುಟಗಳದ್ದು ಮತ್ತು ಗುಜರಾತಿ ಭಾಷೆಯಲ್ಲಿ ಇತ್ತು. ಅದರ ದೃಢೀಕೃತ ಪ್ರತಿ ಪಡೆಯಬೇಕು, ಅದನ್ನು ಇಂಗ್ಲೀಷಿಗೆ ಅನುವಾದಿಸಿ ಅದನ್ನೂ ದೃಢೀಕರಿಸಿಕೊಳ್ಳಬೇಕು. ತೀರ್ಪು ಗುಜರಾತಿಯಲ್ಲಿ ತಯಾರಾಗುವ ಹೊತ್ತಿಗೇ ಇಂಗ್ಲೀಷ ಭಾಷೆಯ ಪ್ರತಿಯೂ ತಯಾರಾಗಿತ್ತು ಎಂದು ಇಟ್ಟುಕೊಳ್ಳೋಣ. ಇಷ್ಟು ದೊಡ್ಡ ತೀರ್ಪಿನ ಪ್ರತಿ ಮರುದಿನ ಲೋಕಸಭೆ ಕಚೇರಿಯ ಆರಂಭದ ಹೊತ್ತಿಗೆ ಅಲ್ಲಿಗೆ ತಲುಪಿದ್ದು ಹೇಗೆ? ಅದನ್ನು ಒಬ್ಬ ಗುಮಾಸ್ತ ಸ್ವೀಕರಿಸಿ ದಾಖಲಿಸಬೇಕು. ನಂತರ ಅದು ಲೋಕಸಭೆಯ ಡೆಪ್ಯುಟಿ ಸೆಕ್ರೆಟರಿಗೆ, ಅವರು ಪರಿಶೀಲಿಸಿದ ನಂತರ ಜಾಯಿಂಟ್ ಸೆಕ್ರೆಟರಿ, ಅವರಿಂದ ಜನರಲ್ ಸೆಕ್ರೆಟರಿ ಮತ್ತು ಕೊನೆಯದಾಗಿ ಸಭಾಪತಿಗೆ ವಿವಿಧ ಸೆಕ್ರೆಟರಿಗಳ ಷರಾದೊಡನೆ ತಲುಪಬೇಕು. ಸಭಾಪತಿಗಳು ಅದನ್ನು ಪರಿಶೀಲಿಸಿ ಕಾನೂನು ವಿಭಾಗದ ಸಲಹೆಗೆ ಕಳುಹಿಸಬೇಕು. ಕಾನೂನು ವಿಭಾಗದ ಸಲಹೆ ಬಂದ ನಂತರ ಇಂಥ ಕ್ರಮಕ್ಕೆ ಮುಂದಾಗಿದ್ದೇವೆ, ನಿಮ್ಮ ಅಭಿಪ್ರಾಯ ಏನು ಎಂದು ಸಂಬಂಧಿಸಿದ ಸದಸ್ಯನನ್ನು ಕೇಳಬೇಕು, ಆಮೇಲೆ ಕ್ರಮ ಜರುಗಿಸಬೇಕು. ಆದರೆ ಇದೆಲ್ಲವೂ ಕೆಲವೇ ನಿಮಿಷಗಳಲ್ಲಿ ಮುಗಿದು, ಮಧ್ಯಾನ್ಹದ ಹೊತ್ತಿಗೆ ರಾಹುಲ್ ಗಾಂಧಿ ಸದಸ್ಯತ್ವ ರದ್ದಾಗಿದ್ದು ಹೇಗೆ ಎನ್ನುವುದು ಯಕ್ಷಪ್ರಶ್ನೆ.
ನ್ಯಾಯಾಲಯದ ತೀರ್ಪುಗಳು ರಾಜಕೀಯ ವ್ಯಕ್ತಿಗಳ ಮೇಲೆ ಮತ್ತು ಅಂದಂದಿನ ರಾಜಕೀಯದ ಮೇಲೆ ವ್ಯಾಪಕ ಪರಿಣಾಮ ಬೀರುತ್ತವೆ. ಈ ಹಿಂದೆ ಅಲಹಾಬಾದ ಹೈಕೋರ್ಟು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಯ್ಕೆ ಅಸಿಂಧು ಎಂದು ಘೋಷಿಸಿದ ಪರಿಣಾಮ ಏನೆಲ್ಲ ನಡೆಯಿತು ಎಂದು ಗಮನಿಸಿದ್ದೇವೆ. ಇಷ್ಟಾಗಿಯೂ ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ಎಚ್ಚರಿಕೆ ವಹಿಸಲಿಲ್ಲ ಎಂದರೆ, ರಾಜಕೀಯದಾಟ ಎಷ್ಟು ಕಠಿಣ ಎಂದು ಯಾರಿಗಾದರೂ ತಿಳಿದೀತು. ನ್ಯಾಯಾಲಯಗಳು ಹೇಗೆ ಕೆಲಸ ಮಾಡುತ್ತಿವೆ ಮತ್ತು ಅದಕ್ಕೆ ಏನೆಲ್ಲ ಸಿದ್ಧತೆಯೊಡನೆ ಹೋಗಬೇಕು ಎಂಬ ಪರಿಜ್ಞಾನ ಇರಬೇಕಾಗುತ್ತದೆ. ಹಿಂದೊಮ್ಮೆ ಯಾವುದೋ ಸಣ್ಣ ಪ್ರಕರಣದಲ್ಲಿ ಪತ್ರಕರ್ತನೊಬ್ಬನಿಗೆ ಶಿಕ್ಷೆ ಆಯಿತು. ಆತ ಜಾಮೀನಿನ ಮೇಲೆ ಹೊರಬರುವ ಅವಕ ಇತ್ತು. ಆದರೆ ಅದಕ್ಕೆ ಆತ ತಯಾರಿ ಮಾಡಿಕೊಂಡು ಬಂದೇ ಇರಲಿಲ್ಲ. ಹೀಗಾಗಿ ಆತ ಅನಗತ್ಯವಾಗಿ ಕೆಲವು ದಿನಗಳಾದರೂ ಜೈಲುವಾಸ ಅನುಭವಿಸಬೇಕಾಯಿತು. ನಮ್ಮಲ್ಲಿಯೇ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ಜನರ ಹಿಂಡು ಕಟ್ಟಿಕೊಂಡು ರಾಜಭವನಕ್ಕೆ ಹೋಗಿ ರಾಜೀನಾಮೆ ಬಿಸಾಕಿ ನ್ಯಾಯಾಲಯಕ್ಕೆ ಹೋದರು. ತಮ್ಮನ್ನು ಜೈಲಿಗೆ ಅಟ್ಟಬಹುದೆಂಬ ಸಣ್ಣ ಕಲ್ಪನೆಯೂ ಅವರಿಗೆ ಇರಲಿಲ್ಲ. ಆದರೆ ಜೈಲು ಅನಿವಾರ್ಯ ಆಯಿತು.
ಅದಕ್ಕೇ ಹೇಳುವುದು ಯುದ್ಧ ಮತ್ತು ರಾಜಕೀಯದಲ್ಲಿ ಮೈಯೆಲ್ಲ ಕಣ್ಣಾಗಿ ಇರಬೇಕು. ಬಹಳಷ್ಟು ಸಲ ರಾಜಕೀಯ ಮಂದಿ ತಮ್ಮ ಸುತ್ತ ಇರುವವರ ಮಾತು ನಂಬುತ್ತಾರೆ. ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಭವಿಷ್ಯ ಏನು ಎಂದು ತಿಳಿಯಲು ಅಂದಿನ ಮುಖ್ಯಮಂತ್ರಿಗಳು ಪೊಲೀಸ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕಾಂಗ್ರೆಸ್ಗೆ ವಿಜಯ ಎಂದೇ ಅವರು ಹೇಳಿದ್ದರು. ಆದರೆ ಇಡೀ ಭಾರತದಲ್ಲಿ ಕಾಂಗ್ರೆಸ್ ಧೂಳೀಪಟ ಆಗಿತ್ತು.
ನ್ಯಾಯಾಲಯದ ತೀರ್ಪಿನ ಹಾಗೆ ಚುನಾವಣೆ ತೀರ್ಪುಗಳು ಕೂಡ ಇತಿಹಾಸವನ್ನೇ ಬದಲಿಸುತ್ತವೆ. ಅದಕ್ಕೆ 1977ರ ಲೋಕಸಭಾ ಚುನಾವಣೆ ಮತ್ತು 1983 ರಾಜ್ಯ ವಿಧಾನಸಭೆ ಚುನಾವಣೆಗಳೇ ಸಾಕ್ಷಿ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಬಿಜೆಪಿ ಆಡಳಿತ ನಡೆಸುತ್ತದೆ ಎಂದು ಯಾರಾದರೂ ಯೋಚಿಸಿದ್ದರಾ? ಈಗ ಮತ್ತೊಮ್ಮೆ ಚುನಾವಣೆ ಹೊಸ್ತಿಲಲ್ಲಿ ನಿಂತಿದ್ದೇವೆ. ನ್ಯಾಯಾಲಯದ ತೀರ್ಪು ಏನು ಪರಿಣಾಮ ಬೀರುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಆದರೆ ಈ ಬಾರಿ ಚುನಾವಣೆಯಲ್ಲಿ ಬಡಾಯಿ ಕೊಚ್ಚುವ ಧೀರರಿಗೆ ಜನ ಏನೇನು ಪಾಠ ಕಲಿಸುತ್ತಾರೋ ತಿಳಿಯದು ಅಥವಾ ಅವರು ಹಂಚುವ ಸೀರೆ, ಕುಕ್ಕರ್ ಮತ್ತಿತರ ವಸ್ತುಗಳಿಗೆ ಮರುಳಾಗಿ ತಮ್ಮ ಮತ ಮಾರಿಕೊಂಡರೆ ಜನರ ಗತಿ ಗೋವಿಂದ.
ಆದರೂ ಜನ ಯಾವತ್ತೂ ಚುನಾವಣೆಗಳಲ್ಲಿ ರಾಜಕೀಯ ಮಂದಿಯ ಲೆಕ್ಕಾಚಾರ ಮೀರಿಯೇ ವರ್ತಿಸುತ್ತ ಬಂದಿದ್ದಾರೆ. ಹಾಲಿ ಮುಖ್ಯಮಂತ್ರಿಗಳನ್ನು ಸೋಲಿಸಿ, ಯಾರೋ ಅನಾಮಧೇಯ ವ್ಯಕ್ತಿಯನ್ನು ಗೆಲ್ಲಿಸಿ ಬೀಗಿದ್ದು ಇದೆ. ರಾಜಕೀಯ ಎಂದರೆ ಹಗ್ಗದ ಮೇಲಿನ ಜಾಣ ನಡೆ ಎನ್ನುತ್ತಾರೆ. ಅದನ್ನು ಸರಿಯಾಗಿ ನಿರ್ವಹಿಸಬಲ್ಲವರು ಮಾತ್ರ ಸುರಕ್ಷಿತ ಎನ್ನುತ್ತಾರೆ. ಆದರೆ ತೀರಾ ಪ್ರಾಮಾಣಿಕರು ವಿಫಲರಾಗುವುದೇ ನಮ್ಮ ಈಗಿನ ರಾಜಕೀಯದ ಬಹುದೊಡ್ಡ ದುರಂತ.
ಅದರಿಂದಾಗಿಯೇ ಉತ್ತಮ ಪ್ರಭುತ್ವ ಕಾಣುವುದು ನಮಗೆ ಇಷ್ಟು ದಿನಗಳಾದರೂ ಸಾಧ್ಯ ಆಗಿಯೇ ಇಲ್ಲ. ಈಗ ಬಂದಿರುವ ಸೂರತ್ ನ್ಯಾಯಾಲಯದ ತೀರ್ಪು ಮತ್ತು ಅನಂತರದ ಬೆಳವಣಿಗೆಗಳು ಬಹುಕಾಲ ಈ ದೇಶದ ರಾಜಕೀಯದಲ್ಲಿ ಸಂಚಲನ ಉಂಟು ಮಾಡುತ್ತಿರುತ್ತವೆ. ಈಗ ಇದು ಹೊಸದು, ನಾಳೆ ಇನ್ನೊಂದು ಬಂದರೆ ಇದು ಮರೆ ಆಗುತ್ತದೆ. ಆಗ ಬೇರೊಂದು ಚದುರಂಗದಾಟ ಶುರು ಆಗುತ್ತದೆ. ಅಲ್ಲಿ ಎದುರು ಬಂದ ಆನೆ ಕೊಲ್ಲುತ್ತದೆ ಎಂದು ರಕ್ಷಣೆ ಪಡೆದರೆ ಹಿಂದಿನಿಂದ ಬಂದ ಕಾಲಾಳು ಇರಿದಿರುತ್ತಾನೆ. ಹಾಗಾಗಿಯೇ ಯುದ್ಧ ಮತ್ತು ರಾಜಕೀಯದಲ್ಲಿ ಮೈಯೆಲ್ಲ ಕಣ್ಣಾಗಿ ಇರಬೇಕಾಗುತ್ತದೆ. ಮನುಷ್ಯ ಇತಿಹಾಸದಿಂದ ಪಾಠ ಕಲಿಯುವುದಿಲ್ಲ, ಹಾಗಾಗಿಯೇ ಘಟನೆಗಳು ಮರುಕಳಿಸುತ್ತವೆ. ಗೆದ್ದವರು ಮೀಸೆ ಮರೆಯಲ್ಲಿ ನಗುತ್ತಾರೆ, ಸೋತವರು ಸೇಡಿಗಾಗಿ ಸಿದ್ಧತೆ ನಡೆಸುತ್ತಾರೆ. -ಎ.ಬಿ.ಧಾರವಾಡಕರ