ಬೆಳಗಾವಿ, ೧೪- ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಅವರು ಸ್ವಯಂ ನಿವೃತ್ತಿ ಪಡೆದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯಕ್ಕೆ ಇಳಿಯಲಿದ್ದು ತಮ್ಮ ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯಲು ವಿಆರ್ಎಸ್ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿಯವರಾದ ಶಂಭು ಅವರು, ತಮ್ಮದೇ ಮತಕ್ಷೇತ್ರ ರಾಯಬಾಗದಲ್ಲಿ ಚುನಾವಣಾ ಕಣಕ್ಕಿಳಿಯಲು ಚಿಂತಿಸಿದ್ದು ಕಾಂಗ್ರೆಸ್ಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ತಮಿಳುನಾಡು ಕೇಡರ್ನ 1991ನೇ ಬ್ಯಾಚ್ನಲ್ಲಿ ಸೇವೆಗೆ ಸೇರಿದ ಶಂಭು ಅವರು ತಮಿಳುನಾಡಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಆರ್ಎಸ್ಗೆ ಅರ್ಜಿ ಸಲ್ಲಿಸಿದ್ದಾರೆ.
ಶಂಭು ಅವರು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದು, ಕಾಂಗ್ರೆಸ್ ಚಿಹ್ನೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂಇದೆ. ಶಂಭು ಅವರ ಕುಟುಂಬವು ರಾಯಬಾಗದಲ್ಲಿ ರಾಜಕೀಯ ನೆಲೆ ಹೊಂದಿದ್ದು, ಅವರ ಸೋದರ ಸಂಬಂಧಿ ಶಾಂತಾ ಕಲ್ಲೋಳಿಕರ ಅವರು 2012ರಲ್ಲಿ ಬೆಳಗಾವಿ ಜಿಪಂ ಅಧ್ಯಕ್ಷರಾಗಿದ್ದರು.
ಅಧಿಕಾರಿಯ ಬೆಂಬಲಿಗರು ಈಗಾಗಲೇ ಕ್ಷೇತ್ರದಲ್ಲಿ ನೆಲಮಟ್ಟದಲ್ಲಿ ಪ್ರಚಾರ ಆರಂಭಿಸಿದ್ದು, ಹಲವು ಮುಖಂಡರನ್ನು ಭೇಟಿ ಮಾಡಿದ್ದಾರೆ. ಇತ್ತೀಚೆಗೆ ದಸರಾ ಸಂದರ್ಭದಲ್ಲಿ ಹುಟ್ಟೂರಿಗೆ ಭೇಟಿ ನೀಡಿದ ಅವರು ಹಲವು ಮುಖಂಡರನ್ನು ಭೇಟಿ ಮಾಡಿ ಹಾಗೂ ರಾಯಬಾಗ ತಾಲೂಕು ವಕೀಲರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಂಭು ಅವರು ರಾಯಬಾಗದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಸಿದ್ಧತೆಯನ್ನು ಖಚಿತಪಡಿಸಿದ್ದು, “ನಾನು ಈಗಾಗಲೇ ವಿಆರ್ಎಸ್ಗೆ ಅರ್ಜಿ ಸಲ್ಲಿಸಿದ್ದೇನೆ. ಈ ತಿಂಗಳ ಅಂತ್ಯದ ವೇಳೆಗೆ ಸೇವೆಯಿಂದ ಮುಕ್ತನಾಗುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.
“ರಾಯಬಾಗ ಕ್ಷೇತ್ರದ ಜನರು ನನಗೆ ಕರೆ ಮಾಡಿ ಚುನಾವಣೆಗೆ ಆಹ್ವಾನಿಸುತ್ತಿದ್ದಾರೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಸರಿಯಾಗಿ ಪ್ರತಿನಿಧಿಸಲಿಲ್ಲ ಎಂದು ಒತ್ತಡ ಹೇರಿತಿದ್ದು, ರಾಯಬಾಗವು ಹಲವು ಕಾರಣಗಳಿಂದ ಹಿಂದುಳಿದಿದೆ” ಎಂದು ಅವರು ತಿಳಿಸಿದ್ದಾರೆ.
“ನಾನು ಕಳೆದ 30 ವರ್ಷಗಳಿಂದ ನನ್ನ ಸ್ವಂತ ಸ್ಥಳದಿಂದ ಹೊರಗಿಳಿದಿದ್ದು, ನನಗೆ ಅವಕಾಶ ಸಿಕ್ಕರೆ, ನನ್ನ ಜನರಿಗಾಗಿ ಏನಾದರೂ ಮಾಡಬೇಕೆಂಬ ಹಂಬಲವನ್ನು ಇಟ್ಟುಕೊಂಡಿದ್ದೇನೆ” ಎಂದು ಹೇಳಿದರು.
‘ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತಮ್ಮೊಂದಿಗೆ ಸಂಪರ್ಕದಲ್ಲಿವೆ’ ಎಂದು ಕಲ್ಲೋಳಿಕರ್ ಖಚಿತಪಡಿಸಿದ್ದು, ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆಂದು ತಿಳಿಸಲು ನಿರಾಕರಿಸಿ, ‘ಏನಾಗುತ್ತದೋ ನೋಡೋಣ’ ಎಂದು ಹೇಳಿದ್ದಾರೆ.
ಕಲ್ಲೋಳಿಕರ್ ಅವರ ಪತ್ನಿ ಅಮುದಾ ಕೂಡ ಐಎಎಸ್ ಅಧಿಕಾರಿಯಾಗಿದ್ದು, ತಮಿಳುನಾಡಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
“ನನ್ನ ಹೆಂಡತಿ ತಮಿಳುನಾಡಿನಲ್ಲಿ ತನ್ನ ಕೆಲಸದಲ್ಲಿ ಮುಂದುವರಿಯುತ್ತಾಳೆ, ಏಕೆಂದರೆ ಅವರ ಎಂಟು ವರ್ಷಗಳ ಸೇವೆ ಇನ್ನೂ ಉಳಿದಿದೆ” ಎಂದು ಅವರು ಹೇಳಿರುವುದಾಗಿ ಇಂಗ್ಲೀಷ ಪತ್ರಿಕೆ ವರದಿ ಮಾಡಿದೆ.