ಬೆಳಗಾವಿ, ೨೭: ನಮ್ಮ ಬೆಳಗಾವಿಗೆ ಬರಬೇಕಿದ್ದ ಹಲವು ಯೋಜನೆಗಳನ್ನು ಮತ್ತು ಉದ್ಯಮಗಳನ್ನು ಕಿತ್ತುಕೊಂಡು ಅವುಗಳನ್ನು ಧಾರವಾಡ ಜಿಲ್ಲೆಗೆ ಕೊಂಡೊಯ್ದ ಹುಬ್ಬಳ್ಳಿ-ಧಾರವಾಡ ವ್ಯಕ್ತಿಗೇನೇ ಬೆಳಗಾವಿಯಿಂದ ಬಿಜೆಪಿ ಟಿಕೆಟ್ ನೀಡಿದ್ದು ಸರಿಯೇ? ಅನ್ಯಾಯವೆಸಗಿದವರು ಅನ್ಯಾಯಕ್ಕೊಳಗಾದ ಜನರ ಬಳಿ ಹೋಗಿ ಮತಯಾಚನೆ ಮಾಡುವುದು ಹೇಗೆ ಎಂದು ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗು ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯ ಪ್ರಮುಖರಲ್ಲಿ ಒಬ್ಬರಾದ ಮಹಾಂತೇಶ ವಕ್ಕುಂದ ಅವರು ಜಗದೀಶ ಶೆಟ್ಟರ್ ಅವರಿಗೆ ಬಿಜೆಪಿಯ ಟಿಕೆಟ್ ನೀಡಿರುವ ಬಗ್ಗೆ ಆಕ್ರೋಷ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣ ಫೇಸಬುಕ್ ನಲ್ಲಿ ಸರಣಿ ಪೋಸ್ಟ ಹಾಕಿರುವ ಅವರು, ಬೆಳಗಾವಿಯಿಂದ ಜಗದೀಶ ಶೆಟ್ಟರ್ ಗೆ ಬಿಜೆಪಿ ಟಿಕೆಟ್ ನೀಡಿದ್ದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಕೋರೋನಾ ಸಮಯದಲ್ಲಿ ಅತೀ ಹೆಚ್ಚಿನ ರೋಗಿಗಳು ಬೆಳಗಾವಿಯಲ್ಲಿ ಸಾಯುತ್ತಿದ್ದಾಗ ಬೆಳಗಾವಿ ಜಿಲ್ಲೆಯ ಜನರನ್ನು ಸಾಯಲು ಬಿಟ್ಟು ಜನರ ಉಸಿರನ್ನು (oxygen) ಹುಬ್ಬಳ್ಳಿ ಧಾರವಾಡಕ್ಕೆ ಬಹುಪಾಲು ಎತ್ತಿಕೊಂಡು ಹೋದವರು ಯಾರು? ಎಂದು ಕೊರೋನಾ ಸಮಯದಲ್ಲಿ ಜಿಲ್ಲೆಯ ಜನರಿಗೆ ಆದ ಅನ್ಯಾಯದ ಬಗ್ಗೆ ವಕ್ಕುಂದ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ ಧಾರವಾಡದ ವ್ಯಕ್ತಿ ಹುಬ್ಬಳ್ಳಿ ಕ್ಷೇತ್ರಕ್ಕೆ ಪ್ರಹ್ಲಾದ ಜೋಶಿ, ಅದೇ ಹುಬ್ಬಳ್ಳಿ ಧಾರವಾಡ ವ್ಯಕ್ತಿಯೇ ಹಾವೇರಿಗೂ ಸಂಸದ, ಈಗ ಅದೇ ಹುಬ್ಬಳ್ಳಿ ಧಾರವಾಡದ ವ್ಯಕ್ತಿ ಬೆಳಗಾವಿಗೂ ಸಹ ಸಂಸದ. ಹಾಗಾದರೆ ಇನ್ನುಳಿದ ಎಲ್ಲ ಉತ್ತರ ಕರ್ನಾಟಕದ ಕ್ಷೇತ್ರಗಳಿಗೂ ಅವರನ್ನೇ ಹಾಕಿಬಿಡಿ. ಮುಂಬರುವ ವಿಧಾನಸಭೆ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿಗೂ ಹುಬ್ಬಳ್ಳಿ ಧಾರವಾಡದವರೇ ಬಂದು ಬಿಡಲಿ, ನಾವು ಬಂದು ಹೋಗುವವರ ಚಾಕರಿ ಮಾಡಿಕೊಂಡು ಇರುತ್ತೇವೆ ಎಂದು ಬೆಳಗಾವಿ ಜಿಲ್ಲೆಯಲ್ಲಿ ಯೋಗ್ಯ ಅಭ್ಯರ್ಥಿಗಳೇ ಇಲ್ಲವೆನ್ನುವಂತೆ ನಡೆದುಕೊಂಡಿರುವ ಬಿಜೆಪಿ ವರಿಷ್ಠರ ಕ್ರಮವನ್ನು ಬಲವಾಗಿ ಟೀಕಿಸಿದ್ದಾರೆ.
ಕಳೆದ ೫ ಬಾರಿ ಅಂಗಡಿ ಕುಟುಂಬಕ್ಕೆ ಬೆಳಗಾವಿಯ ಮಹಾಜನತೆ ಆಶೀರ್ವಾದ ಮಾಡಿದ್ದರು. ಈ ಜನರ ಆಶೀರ್ವಾದದಿಂದಲೇ ಹೆಸರು ಕೀರ್ತಿ ಯಶಸ್ಸು ಎಲ್ಲವನ್ನೂ ಅವರು ಸಂಪಾದಿಸಿದರು. ವಿಪರ್ಯಾಸವೆಂದರೆ ಬೆಳಗಾವಿ ಜನರಿಂದ ಇಷ್ಟೆಲ್ಲಾ ಪಡೆದವರು ಬೆಳಗಾವಿಗರಿಗೆ ಸಿಗಬಹುದಾದ ಅವಕಾಶ ತಪ್ಪಿಸಿ, ಹುಬ್ಬಳ್ಳಿಯ ತಮ್ಮ ಬೀಗರಿಗೆ ಬೆಳಗಾವಿ ಟಿಕೆಟ್ ಬಿಟ್ಟು ಕೊಟ್ಟರು. ಅವರಿಗೆ ಇಷ್ಟೆಲ್ಲಾ ಆಶೀರ್ವಾದ ಮಾಡಿದ ನಮ್ಮ ಜಿಲ್ಲೆಯವರಿಗೆ ಟಿಕೆಟ್ ಸಿಗಲಿ ಎಂಬ ಒಂದು ಮಾತನ್ನೂ ಸಹ ಅವರು ಆಡಲಿಲ್ಲ ಎಂದು ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರ ಬಗ್ಗೆಯೂ ವಕ್ಕುಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಕ್ಷೇತ್ರದ ಜನರ ಭಾವನೆಗೆ ಬೆಲೆ ತುಂಬುವ ಕೆಲಸ ನಮ್ಮಿಂದಾಗಬೇಕು, ಅವರ ಆಶೋತ್ತರಳಿಗೆ ಸ್ಪಂದಿಸಬಲ್ಲ ವ್ಯಕ್ತಿ ಅವರೊಳಗಿನ ಒಬ್ಬನಾಗಿರಬೇಕು, ಅದನ್ನು ಈಡೇರಿಸುವುದು ಈ ಮಹಾಜನತೆಯ ನಾಡಿ ಮಿಡಿತ ಅರಿತವನಿಗೇ ಅದೆಷ್ಟೋ ಕಷ್ಟ ಸಾಧ್ಯವಾಗಿ ಹೋಗುತ್ತದೆ. ಅಂತಹದರಲ್ಲಿ ನನ್ನ ಕ್ಷೇತ್ರದ ಜನ ಯಾರು ಎಂಬುದನ್ನು ಅರಿಯದವ ಯಾವ ಜನಸೇವೆ ಮಾಡಬಲ್ಲ ? ವಕ್ಕುಂದ ಪ್ರಶ್ನಿಸಿದ್ದಾರೆ.
ಸಿಕ್ಕ ಸಿಕ್ಕವರನ್ನು – ಹೊರಗಿನವರನ್ನು ನಮ್ಮ ಮೇಲೆ ಈ ರೀತಿ ಹೇರುತ್ತ ಹೋಗುವುದಾದರೆ ಸ್ಥಳೀಯ ಕಾರ್ಯಕರ್ತರು ಕೇವಲ ಪಕ್ಷದ ಹಮಾಲಿ ಕಾರ್ಯ ಮಾಡಲು ದುಡಿಯಬೇಕೆ ? ಮೋದಿಯವರನ್ನು ಸದಾ ಗೆಲ್ಲಿಸುತ್ತೇವೆ ಎಂಬ ಕಾರಣಕ್ಕೆ 19 ಲಕ್ಷ ಬೆಳಗಾವಿ ಲೋಕಸಭೆಯ ಮತದಾರರಿಗೆ ಅಭಿಪ್ರಾಯವೇ ಇಲ್ಲವೇ ? ಈ ಕ್ಷೇತ್ರದ ಮೂರು ಲಕ್ಷ ಮರಾಠಾ ಮತದಾರರಿಗೆ, ಇಲ್ಲಿರುವ ದೂರ ದೂರದ ಹಳ್ಳಿಗಳ ಸಾಮಾನ್ಯ ಜನಕ್ಕೆ ಈ ನಿರ್ಧಾರದಿಂದ ನ್ಯಾಯ ಸಿಗಲು ಸಾಧ್ಯವೇ ? ಎಂದು ವಕ್ಕುಂದ ಪ್ರಶ್ನಿಸಿದ್ದಾರೆ.
ದೊಡ್ಡ ದೊಡ್ಡ ನಾಯಕರು ದೊಡ್ಡ ದೊಡ್ಡ ಹೊಂದಾಣಿಕೆ, ಸಂಧಾನ ಮಾಡಿಕೊಂಡು. ವಿಧಾನಸಭೆಯಲ್ಲಿ ಸಣ್ಣ ಕಾರ್ಯಕರ್ತನ ಮುಂದೆ ಸೋತ ಹುಬ್ಬಳ್ಳಿಯ ರಾಜಕಾರಣಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮರಳಿ ಪಕ್ಷಕ್ಕೆ ಕರೆ ತರುತ್ತಾರೆ. ಅವರಿಗೆ ಎಂಪಿ ಮಾಡುವುದಾಗಿ ಮಾತು ಕೊಡುತ್ತಾರೆ, ಹಾಗಾಗಿ ಬೆಳಗಾವಿಯ ಮೇಲೆ ಅವರನ್ನು ಹೇರುತ್ತಾರೆ, ಬೆಳಗಾವಿಯ ಜನ ಜೈ ಜೈ ಎನ್ನುತ್ತ ಅವರ ಚುನಾವಣೆ ಮಾಡಬೇಕಂತೆ, ಯಾಕೆ ಹೇಳಿ ? ನಾವು ಗುಲಾಮರೇ, ನಮ್ಮನ್ನು ಯಾರು ಬೇಕಾದರೂ ಆಳಬಹುದು. ನಮಲ್ಲಿ ಒಗ್ಗಟ್ಟಿಲ್ಲ, ನಮಗೆ ಪ್ರಶ್ನಿಸಲು ಮಾತನಾಡಲು ಬರೋಲ್ಲ, ಹಾಗಾಗಿ ಯಾರು ಬಂದರೂ ಕೋಲೆ ಬಸವನ ರೀತಿ ನಾವು ತಲೆ ಅಲ್ಲಾಡಿಸಿ ಒಪ್ಪಿಕೊಳ್ಳುತ್ತೇವೆ ಎಂಬ ಭಾವನೆ ಪಕ್ಷದ ಹಿರಿಯರದ್ದು ಎಂದು ಅವರು ಬಿಜೆಪಿ ಅಧ್ಯಕ್ಷ ಹಾಗು ಯಡಿಯೂರಪ್ಪ ಅವರ ಬಗ್ಗೆ ಪರೋಕ್ಷವಾಗಿ ತಮ್ಮ ನೋವು ಹೊರ ಹಾಕಿದ್ದಾರೆ.
ದೊಡ್ಡ ದೊಡ್ಡವರ ಸಂಧಾನವಾಗಿ ಅವರು ಪಕ್ಷ ಬಿಟ್ಟು ಹೋದವರನ್ನು ಪಕ್ಷಕ್ಕೆ ಮರಳಿ ತಂದರೆ ಮರಳಿ ಬಂದ ವ್ಯಕ್ತಿಯ ಸ್ವಕ್ಷೇತ್ರದಲ್ಲಿ ಅವರಿಗೆ ಅವಕಾಶ ಕಲ್ಪಿಸಬೇಕಿತ್ತು, ಬೇಡಾದದ್ದನ್ನು ಬಿಸಾಡಲು ಬೆಳಗಾವಿ ಕರ್ನಾಟಕದ ತಿಪ್ಪೆ ಗುಂಡಿಯೇ ? ಎಂದು ಮಹಾಂತೇಶ ವಕ್ಕುಂದ ವಾಗ್ದಾಳಿ ನಡೆಸಿದ್ದಾರೆ.
ಇಷ್ಟು ದೊಡ್ಡ ಜಿಲ್ಲೆಯಲ್ಲಿ, ಇಷ್ಟೆಲ್ಲಾ ಜನ ಸೇವಕರಿರುವಾಗ ಅವರಲ್ಲಿನ ಯಾರೊಬ್ಬರಿಗೆ ಅವಕಾಶ ಸಿಕ್ಕಿದ್ದರೂ ತಲೆಬಾಗಿ ಅದನ್ನು ನಾವೆಲ್ಲಾ ಒಕ್ಕೊರಲಿನಿಂದ ಒಪ್ಪಿ ಮುನ್ನಡೆಯಬಹುದು. ಆದರೆ ಪಕ್ಷದ ಸಿದ್ದಾಂತಗಳಿಗೆ ತಲೆಬಾಗಿ ಬೆಲೆ ಕೊಟ್ಟು ನಡೆದ ಕಾರ್ಯಕರ್ತರ ಶಿರಚ್ಛೇಧನ ಮಾಡುವ ಮಟ್ಟಕ್ಕೆ ನಾವು ತಾಯಿ ಎಂದು ನಂಬಿರುವ ಪಕ್ಷದ ಹಿರಿಯರು ಇಳಿದರೆ ನಮ್ಮಂತಹ ಅನಾಥ ಮಕ್ಕಳಿಗೆ ಆಸರೆ ಯಾರು ? ಎಂದೂ ವಕ್ಕುಂದ ಪ್ರಶ್ನಿಸಿದ್ದಾರೆ.
ಒಬ್ಬ ಕಾರ್ಯಕರ್ತ ತನ್ನ ಮನೆ, ಕೆಲಸ, ವ್ಯಾಪಾರ ಹಾಗು ಕುಟುಂಬದ ಭವಿಷ್ಯವನ್ನೂ ಅಡವಿಟ್ಟು ಪಕ್ಷಕ್ಕಾಗಿ ದುಡಿಯುತ್ತಾನೆ. ಹತ್ತಾರು ವರ್ಷ ಆಯಸ್ಸನ್ನೇ ಸವೆಸಿ ದೇಶಕ್ಕಾಗಿ ತನ್ನ ಜೀವನವನ್ನು ಸಮರ್ಪಿಸುತ್ತಾನೆ ಅಂತಹ ಕಾರ್ಯಕರ್ತ ಏನೋ ಆಗಬಲ್ಲ ಎಂಬ ಸಣ್ಣ ಆಶಾಕಿರಣ ಮೂಡುತ್ತಿರುವಾಗಲೇ ಪಕ್ಷದಿಂದ ಪಕ್ಷಕ್ಕೆ ಹಾರುವ ಹಿರಿತಲೆಗಳು ಆ ಕಾರ್ಯಕರ್ತನ ಭವಿಷ್ಯದ ಬಲಿ ಪಡೆಯುತ್ತಾರೆ. ಅಲ್ಲಿಗೆ ಉಳ್ಳವರು ಮಾತ್ರ ರಾಜಕಾರಣ ಮಾಡುವುದು, ಕಾರ್ಯಕರ್ತರು ಕೇವಲ ಧ್ವಜ ಕಟ್ಟುವುದು ಮಾತ್ರ ಅವರ ಕೆಲಸವಾಗಿದೆ ಎಂದು ಅವರು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮೋದಿಯವರು ಗುಜರಾತಿನವರು ಅವರಿಗೆ ಉತ್ತರ ಪ್ರದೇಶದಲ್ಲಿ ಸೀಟು ಕೊಡಲಾಗಿದೆ ಎಂದು ಉದಾಹರಣೆ ನೀಡುವ ಮಹನೀಯರು ಮೋದಿ ಬೆಳಗಾವಿಯ ಅಭ್ಯರ್ಥಿಯಂತೆ ಅವಕಾಶವಾದಿಯಲ್ಲ, ಚಿಲ್ಲರೆ ಆಸೆಗೆ ಪಕ್ಷಾಂತರಿ ಆದವರಲ್ಲ, ಆರು ತಿಂಗಳಲ್ಲಿ ಪಕ್ಷದಿಂದ ಪಕ್ಷಕ್ಕೆ ಹಾರಿದವರಲ್ಲ ಎಂಬುದುನ್ನು ಮರೆತು ಬಿಟ್ಟಿದ್ದಾರೆ. ತನ್ನ ಸ್ವಾರ್ಥಕ್ಕಾಗಿ ನಮ್ಮ ಪಕ್ಷವನ್ನೇ ನಿಂದಿಸಿ,ನಮ್ಮ ಪ್ರಧಾನಿಯ ಬಗ್ಗೆ ಕೀಳಾಗಿ ಮಾತನಾಡಿದ ವ್ಯಕ್ತಿಗೆ ನಮ್ಮ ಪಕ್ಷದಿಂದ ಸ್ಪರ್ಧಿಸುವ ಯಾವ ನೈತಿಕ ಹಕ್ಕಿದೆ? ಅವರು ಪ್ರಶ್ನಿಸಿದ್ದಾರೆ.
ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ
ಕಳೆದ ೧೦-೧೫ ವರ್ಷಗಳಿಂದ ಬಿಜೆಪಿ ಯುವ ಮೋರ್ಚಾ ಮತ್ತು ಬಿಜೆಪಿಯ ಹಲವಾರು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಮಹಾಂತೇಶ ವಕ್ಕುಂದ ಅವರು, ಕೊರೋನಾ ಮಹಾಮಾರಿಯ ಸಮಯದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಜಿಲ್ಲೆಯಾದ್ಯಂತ ರೋಗಿಗಳಿಗೆ ಊಟ, ಔಷಧ ಒದಗಿಸುತ್ತ ಜನಸೇವೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮಹಾಂತೇಶ ವಕ್ಕುಂದ ಅವರು ಸಮದರ್ಶಿಯೊಂದಿಗೆ ಮಾತನಾಡಿ, “ಬೆಳಗಾವಿಗೆ ಅನ್ಯಾಯ ಮಾಡಿದ ವ್ಯಕ್ತಿಗೇನೇ ಬಿಜೆಪಿ ಟಿಕೆಟ್ ನೀಡಿರುವ ಕ್ರಮ ಖಂಡಿಸಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ತಮ್ಮ ಮೇಲೆ ಜಿಲ್ಲೆಯ ಕಾರ್ಯಕರ್ತರ ಒತ್ತಡ ಬರುತ್ತಿದ್ದು ಶೀಘ್ರದಲ್ಲೇ ಕಾರ್ಯಕರ್ತರ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.