ಬೆಳಗಾವಿ, ಜುಲೈ ೧೧: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಕುರಿತು ನಮ್ಮ ಸಮಾಜದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ವಿಧಾನಸಭೆಯ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಬೇಕೆಂದು ಆಗ್ರಹಿಸಿ ಕೂಡಲ ಸಂಗಮ ಪಂಚಮಸಾಲಿ ಸಮಾಜದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪತ್ರ ಚಳುವಳಿ ನಡೆಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೂಡಲ ಸಂಗಮ ಪಂಚಮಸಾಲಿ ಸಮಾಜದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಮೊದಲಿನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ಮಂಚೂಣಿಯಲ್ಲಿದ್ದು ನಿಂತು ಹೋರಾಟ ಮಾಡಿದ್ದರು. ಕಳೆದ ಬಿಜೆಪಿ ಸರಕಾರದಲ್ಲಿ 2ಡಿ ಮೀಸಲಾತಿ ಕೊಟ್ಟಿತ್ತು. ಅದು ನಮಗೆ ಬೇಡ 2 ಎ ಮೀಸಲಾತಿ ನೀಡಬೇಕೆಂದು ಹೋರಾಟ ಮತ್ತೆ ಮುಂದುವರೆಸಿದೇವು. ಕಾಂಗ್ರೆಸ್ ಸರಕಾರ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತಂದಾಗ ಸರಕಾರ ಈಗ ರಚನೆಯಾಗಿದೆ. ಸ್ವಲ್ಪ ಕಾಲಾವಕಾಶ ಕೊಡಬೇಕು ಎಂದಿದ್ದರು. ಆದರೆ ನಮಗೆ ಮನ್ನಣೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ನಿಪ್ಪಾಣಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಮತ್ತೆ ಹೋರಾಟ ಆರಂಭಿಸಿದ್ದೇವು ಎಂದರು.
ಕಳೆದ ಫೆ.22 ರಂದು ಬೆಂಗಳೂರಿನ ಹೆಬ್ಬಾಳ್ಕರ ಅವರ ಕಚೇರಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಸಭೆ ಕರೆದು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪಂಚಮಸಾಲಿ ಸಮಾಜದ ಮೀಸಲಾತಿಗೆ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಪತ್ರ ಕೊಟ್ಟಿದ್ದರು. ಅದು ಕಾರಣಾಂತರಗಳಿಂದ ರದ್ದಾಯಿತು ಎಂದರು.
ಭೂಮಿಯನ್ನು ನಂಬಿಕೊಂಡು ಜೀವನ ಮಾಡುತ್ತಿರುವ ಪಂಚಮಸಾಲಿ ಸಮಾಜ, ಮಲೆಗೌಡ ಸಮಾಜಕ್ಕೆ ಮೀಸಲಾತಿ ಸಿಗಬೇಕು ಹಾಗೂ ಲಿಂಗಾಯತ ಸಮಾಜದ ಒಳಪಂಗಡಗಳಿಗೆ ಕೇಂದ್ರ ಸರಕಾರದ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈಗ ಎಲ್ಲ ಪಂಚಮಸಾಲಿ ಸಮಾಜದ ಶಾಸಕ. ಸಚಿವರಿಗೆ ಸನದಲ್ಲಿ ಸಮಗ್ರ ಚರ್ಚೆ ನಡೆಸಿ ಮೀಸಲಾತಿ ಕೊಡಿಸಬೇಕು ಎಂಬುದು ಎಲ್ಲ ಪಂಚಮಸಾಲಿ ಸಮಾಜದ ಒತ್ತಾಯವಾಗಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಅಂತಿಮಗಟ್ಟದಲ್ಲಿ ತಲುಪಿದೆ. ಶ್ರೀಗಳು ನೇತೃತ್ವದಲ್ಲಿ ಕಳೆದ ಮೂರುವರೆ ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಪಂಚಮಸಾಲಿ ಸಮಾಜದವರು ಬಸವ ತತ್ವದಲ್ಲಿ ನಡೆಯುವವರು. ಕೆಲವರು ನಮ್ಮ ಸಹನೆಯನ್ನು ಅಗ್ನಿಪರೀಕ್ಷೆ ಮಾಡುತ್ತಿದ್ದಾರೆ. ಸಮಾಜದ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ನಾವು ಬೇರೆ ಸಮಾಜಕ್ಕೆ ಅನ್ಯಾಯ ಮಾಡಿ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿ ಎನ್ನುತ್ತಿಲ್ಲ. ಈ ಮಾತನ್ನು ಶ್ರೀಗಳು ಹೋರಾಟದ ಮೊದಲ ದಿನವೇ ಹೇಳಿದ್ದಾರೆ. ವಿಧಾನಸಭೆಯ ಅಧಿವೇಶನದಲ್ಲಿ ಸಮಾಜದ ಎಲ್ಲ ಶಾಸಕ, ಸಚಿವರನ್ನು ಒಟ್ಟಿಗೆ ಸೇರಿ ಚರ್ಚೆ ಮಾಡುತ್ತೇವೆ. ನಾನು ಕಿತ್ತೂರು ರಾಣಿ ಚನ್ನಮ್ಮನ ವಂಶಸ್ಥಳು. ರಾಜಕಾರಣ ನಿಂತ ನೀರಲ್ಲ. ಸಮಾಜದ ಎಲ್ಲಾ ಬಾಂಧವರ ನನ್ನ ಪರವಾಗಿ ನಿಂತಿರುವುದಕ್ಕೆ ನಾನು ಋಣಿಯಾಗಿದ್ದೇನೆ. ನನ್ನ ಬದ್ಧತೆ ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಆರ್.ಕೆ.ಪಾಟೀಲ, ಗುಂಡು ಪಾಟೀಲ, ಶಿವಾನಂದ ತಂಬಾಕಿ, ನಂದು ಕಾರಜೋಳ, ಬಸವರಾಜ ಪಾಟೀಲ, ಸಿದ್ದನಗೌಡ ಪಾಟೀಲ, ಆನಂದ ಗುಡಸ, ರಾವಸಾವ್ ಪಾಟೀಲ, ರಾಜು ಮಗದುಮ್ಮ, ಬಸವರಾಜ ಕೊಟ್ಟೂರಶೆಟ್ಟಿ, ಸುರೇಶ ಹೊಸಪೇಟ, ಶಿವಪ್ಪ ಸವದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.