ಸವದತ್ತಿ, ೧೪- ಮಕ್ಕಳನ್ನು ಶಾಲೆಗೆ ಸಾಗಿಸುತ್ತಿದ್ದ 12-ಆಸನದ ಮಿನಿ ವ್ಯಾನೊಂದು ರಸ್ತೆ ಬದಿಯ ಹೊಲವೊಂದರಲ್ಲಿ ಉರುಳಿ ಬಿದ್ದು 37 ಮಕ್ಕಳು ಅಲ್ಪಸ್ವಲ್ಪ ಗಾಯಗೊಂಡ ಘಟನೆ ಸವದತ್ತಿ ತಾಲ್ಲೂಕಿನ ಮುರಕುಂಬಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಗಾಯಗೊಂಡವರಲ್ಲಿ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಲ್ಲರಿಗೂ ಬೈಲಹೊಂಗಲನ ಸರಕಾರಿ ಆಸ್ಪತ್ರೆಯಲ್ಲಿಚಿಕಿಸ್ತೆ ನೀಡಿ ಬಿಡುಗಡೆ ಮಾಡಲಾಗಿದೆ.
ಗಣಾಚಾರಿ ಶಿಕ್ಷಣ ಸಂಸ್ಥೆಯು ಎಕ್ಸಲೆಂಟ್ ಎಜುಕೇಶನ್ ಕಾನ್ವೆಂಟ್ಸ್ಕೂಲ್ ಎಂಬ ಹೆಸರಿನಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಕನ್ನಡ ಮಾಧ್ಯಮದಲ್ಲಿ ಬೈಲಹೊಂಗಲ ಪಟ್ಟಣದಲ್ಲಿ ನಡೆಸುತ್ತಿದೆ. ಬೈಲಹೊಂಗಲ ಮಾತ್ರವಲ್ಲದೇ ಪಕ್ಕದ ಸವದತ್ತಿ ತಾಲ್ಲೂಕಿನ ಹಲವು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಮತ್ತು ಪುನಃ ಬಿಟ್ಟು ಬರಲು ರಿಕ್ಷಾಕ್ಕಿಂತ ಸ್ವಲ್ಪ ದೊಡ್ಡ ಗಾತ್ರದ ಮಿನಿ ವ್ಯಾನ್ ಗಳ ವ್ಯವಸ್ಥೆಯನ್ನು ಶಾಲೆ ಮಾಡಿದೆ.
ಇಂತಹ ಒಂದು ವಾಹನ ಬೈಲಹೊಂಗಲ ಮತ್ತು ಸವದತ್ತಿ ತಾಲ್ಲೂಕಿನ ಗಡಿ ಗ್ರಾಮಗಳಿಂದ ವಿದ್ಯಾರ್ಥಿಗಳನ್ನು ಶುಕ್ರವಾರ ಮುಂಜಾನೆ ಶಾಲೆಗೆ ಕರೆದುಕೊಂಡು ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಮುರಕುಂಬಿ ಗ್ರಾಮದ ಹೊರವಲಯದ ಹೊಲವೊಂದರಲ್ಲಿ ಪಲ್ಟಿಯಾಗಿ ಬಿದ್ದಿತು.ಅಪಘಾತ ಕಂಡು ರಸ್ತೆಯಲ್ಲಿದ್ದವರು ತಕ್ಷಣವೇ ಧಾವಿಸಿ ಉರುಳಿ ಬಿದ್ದ ವಾಹನವನ್ನು ಎತ್ತಿ ನಿಲ್ಲಿಸಿ ಎಲ್ಲ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮಕ್ಕಳೆಲ್ಲ ಅಲ್ಪಸ್ವಲ್ಪ ಗಾಯಗೊಂಡಿದ್ದು ಪ್ರಥಮ ಚಿಕಿತ್ಸೆ ನೀಡಿ, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ನಂತರ ಆಸ್ಪತ್ರೆಗೆ ಧಾವಿಸಿ ಬಂದಿದ್ದ ಅವರ ಪಾಲಕರೊಂದಿಗೆ ಕಳುಹಿಸಲಾಯಿತು.
ಅಪಘಾತಕ್ಕೀಡಾದ ವಾಹನ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಮೀಸಲಾಗಿರಿಸಿತ್ತು. ಆದರೆ ಶಾಲಾ ಆಡಳಿತ ಮಂಡಳಿ ಶಾಲೆಗೆ ಬರುವ ಎಲ್ಲ ವಿದ್ಯಾರ್ಥಿಗಳನ್ನು ಇದೇ ವಾಹನದಲ್ಲಿ ಸಾಗಿಸುತ್ತಿತ್ತು. ಅತೀ ಹೆಚ್ಚು ಎಂದರೆ 20 ಪುಟ್ಟ ಮಕ್ಕಳು ಪ್ರಯಾಣಿಸಬಹುದಾಗಿದ್ದ ಈ ವಾಹನದಲ್ಲಿ ಹೈಸ್ಕೂಲ್ ಮಕ್ಕಳು ಸೇರಿದಂತೆ 37 ವಿದ್ಯಾರ್ಥಿಗಳು ಶಾಲೆಗೆ ಹೊರಟಿದ್ದರು. ಚಾಲಕನನ್ನು ಹೊರತು ಪಡಿಸಿ ಕೇವಲ ಇಬ್ಬರು ವಯಸ್ಕರು ಪ್ರಯಾಣಿಸಬಹುದಾಗಿದ್ದ ಡ್ರೈವರ್ ಕ್ಯಾಬಿನ್ ನಲ್ಲಿ ಸುಮಾರು 15 ಮಕ್ಕಳು ಪ್ರಯಾಣಿಸುತ್ತಿದ್ದರು. ಮಕ್ಕಳ ಗಲಾಟೆಯಿಂದ ಚಾಲಕ ವಿಚಲಿತನಾಗಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಈ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.
ಗಾಯಗೊಂಡ ಮಕ್ಕಳ ಪಾಲಕರು ಸಮದರ್ಶಿಯೊಂದಿಗೆ ಮಾತನಾಡಿ, “ಇಷ್ಟು ಪುಟ್ಟ ವಾಹನದಲ್ಲಿ ಸುಮಾರು 40 ಮಕ್ಕಳನ್ನು ಸಾಗಿಸಬೇಡಿ. ಇದಕ್ಕಿಂತ ದೊಡ್ಡ ವಾಹನದ ವ್ಯವಸ್ಥೆ ಮಾಡಿ ಎಂದು ಹಲವು ಬಾರಿ ಸೂಚಿಸಿದರೂ ಶಾಲಾ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಹೆಚ್ಚು ಎಂದರೆ 20 ಮಕ್ಕಳನ್ನು ಸಾಗಿಸಬಹುದಾಗಿರುವ ವಾಹನದಲ್ಲಿ 40 ಮಕ್ಕಳನ್ನು ಸಾಗಿಸಿದರೆ ಹೇಗೆ. ಇವರ ವಿರುದ್ಧ ಯಾರೂ ಕ್ರಮ ಜರುಗಿಸುವುದಿಲ್ಲವೇ? ಎಂದು ಆಕ್ಷೇಪ ವ್ಯಕ್ತ ಪಡಿಸಿದರು.
ಈ ಕುರಿತು ಸಮದರ್ಶಿ ಗೆ ಪ್ರತಿಕ್ರಿಯಿಸಿರುವ ಸವದತ್ತಿ ತಾಲ್ಲೂಕಿನ ಉಸ್ತುವಾರಿಯೂ ಆಗಿರುವ ರಾಮದುರ್ಗ ಆರ್ ಟಿ ಓ ರಾಜೇಂದ್ರ ಬಾರಿಗಿಡದ ಅವರು, ತಮ್ಮ ವ್ಯಾಪ್ತಿಯಲ್ಲಿ ಬರುವ ಇಲಾಖೆಯಲ್ಲಿ ಇರುವ ಮೂರೂ ಸಾರಿಗೆ ಇನ್ಸಪೆಕ್ಟರ್ ಹುದ್ದೆಗಳು ಖಾಲಿಯಿವೆ. ಹಾಗಾಗಿ ಇಂತಹ ಪ್ರಕರಣಗಳ ಕಡೆಗೆ ಗಮನ ಹರಿಸಲು ಆಗಲಿಲ್ಲ. ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಸಾಗಿಸಲು ಪಡೆದುಕೊಂಡಿರುವ ಅನುಮತಿಗೆ ವಿರುದ್ಧವಾಗಿ ನಡೆದುಕೊಂಡಿದೆ. ನಿಯಮ ಮೀರಿದ್ದಕ್ಕೆ ಶಾಲೆಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಬೆಳಗಾವಿ ಆರ್ ಟಿ ಓ ನಾಗೇಶ ಮುಂದಾಸ ಅವರು ಕೂಡ ಇದೇ ಅಭಿಪ್ರಾಯ ನೀಡಿ ಜವಾಬ್ದಾರಿಯಿಂದ ನುಸುಳಿಕೊಂಡರು. “ಬೆಳಗಾವಿ ವಲಯಕ್ಕೆ 34 ಆರ್ ಟಿ ಓ ಇನಸ್ಪೆಕ್ಟರಗಳ ಅವಶ್ಯಕತೆ ಇದೆ. ಆದರೆ ಇದ್ದದ್ದು 13 ಮಾತ್ರ. ವಾಹನಗಳ ದಾಖಲೆ, ಸಾಗಿಸುವ ಸರಕು ತಪಾಸಣೆ ಅಲ್ಲದೇ ಕಚೇರಿ ಕೆಲಸ, ಅನುದಿನದ ವರದಿ ಕೂಡ ಸಲ್ಲಿಸಬೇಕಾಗಿರುತ್ತದೆ. ಹಾಗಾಗಿ ಇಂತಹ ವಿಷಯಗಳ ಕುರಿತು ಗಮನ ನೀಡಲು ಆಗುತ್ತಿಲ್ಲ. ಪಾಲಕರೇ ಈ ವಿಷಯಗಳಲ್ಲಿ ತಮ್ಮ ಮಕ್ಕಳ ಸುರಕ್ಷತೆಯ ಕುರಿತು ನಿರ್ಣಯ ತೆಗೆದುಕೊಳ್ಳಬೇಕು. ಶಾಲಾ ವಾಹನಗಳಲ್ಲಿ, ರಿಕ್ಷಾಗಳಲ್ಲಿ ಮಿತಿಗಿಂತ ಹೆಚ್ಚು ಮಕ್ಕಳನ್ನು ಸಾಗಿಸುವ ಕುರಿತು ಪಾಲಕರು, ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದರು.
ಪೋಷಕರು ಸಾಕ್ಷಿ ಕೊಟ್ಟರೆ ಕ್ರಮ ಜರುಗಿಸುವ ಕುರಿತು ಹೇಳಿದ ಆರ್ ಟಿಓ ಮುಂದಾಸ ಅವರು, ಪ್ರತಿ ಶಾಲೆಯ ಹೊರಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಶಾಲೆಗೆ ಮಕ್ಕಳನ್ನು ಬಿಡಲು ಪುನಃ ಮನೆಗೆ ಕರೆದುಕೊಂಡು ಹೋಗಲು ಬರುವ ವಾಹನಗಳ ಫುಟೇಜ್ ಅವುಗಳಲ್ಲಿ ದಾಖಲಾಗಿರುತ್ತದೆ. ಈ ಆಧಾರದ ಮೇಲೆ ನಿಯಮ ಮೀರಿದ ಚಾಲಕರ, ಶಾಲಾ ವಾಹನಗಳ ಕುರಿತು ಕ್ರಮ ಜರುಗಿಸಬಹುದಲ್ಲ ಎಂಬ ಪ್ರಶ್ನೆಗೆ ‘ಸಿಬ್ಬಂದಿ ಕೊರತೆ ಕಾರಣ‘ ವೆಂಬ ಉತ್ತರವನ್ನೇ ಪುನರ್ರುಚ್ಛರಿಸಿದರು.
ಎನ್ ಜಯರಾಮ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಶಾಲಾ ಚಿಕ್ಕಮಕ್ಕಳಿಂದ ತುಂಬಿದ್ದ ರಿಕ್ಷಾವೊಂದು ಬೆಳಗಾವಿ ಎಪಿಎಂಸಿ ರಸ್ತೆಯಲ್ಲಿ ಉರುಳಿ ಬಿದ್ದಿತ್ತು. ಅದೃಷ್ಟವಶಾತ್ ಆಗ ಯಾವ ಮಗುವಿಗೂ ಗಾಯವಾಗಿರಲಿಲ್ಲ. ಆಗ ಜಿಲ್ಲಾಧಿಕಾರಿಗಳು ರಿಕ್ಷಾಗಳಲ್ಲಿ ಆರು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಸಾಗಿಸದಿರಲು ಆದೇಶ ಹೊರಡಿಸಿದ್ದರು. ಅದಕ್ಕೆ ರಿಕ್ಷಾ ಚಾಲಕರು ಆರು ಮಕ್ಕಳನ್ನು ಸಾಗಿಸುವುದರಿಂದ ತಮಗೆ ಹಾನಿಯಾಗುತ್ತದೆ ಎಂದು ಹೇಳಿ ಪ್ರತಿ ಮಗುವಿಗೆ ಹೆಚ್ಚು ಹಣ ಪಡೆಯತೊಡಗಿದರು. ಆದರೆ, ಕೆಲ ದಿನಗಳಲ್ಲೇ ಮತ್ತೆ ಮೊದಲಿನಂತೆ ಹೆಚ್ಚು ಮಕ್ಕಳನ್ನು ತುಂಬಿ ಸಾಗಿಸಲು ಪ್ರಾರಂಭಿಸಿದರು. ಆದರೆ ಪಡೆದುಕೊಳ್ಳುವ ಹಣಮಾತ್ರ ಕಡಿಮೆ ಮಾಡಲಿಲ್ಲ. ಅದು ಇಂದಿನ ವರೆಗೂ ಮುಂದುವರೆದಿದೆ.