ನಮ್ಮ ಹೆಚ್ಚಿನ ಜನಪ್ರತಿನಿಧಿಗಳದ್ದು ಕೇವಲ ಕೂತು ತಿನ್ನುವ ಕೆಲಸ, ಆದರೆ ಅವರ ಆಸ್ತಿ ಮಾತ್ರ ತನ್ನಿಂದ ತಾನೇ ಹೆಚ್ಚುತ್ತ ಹೋಗುತ್ತದೆ. ಇವರು ಕಳ್ಳಾಟ ಮಾಡಿ ಕೋಟಿಗಟ್ಟಲೇ ಹಣ ಹಂಚಿ ಗೆದ್ದು ಬಂದರೂ ಇವರ ಕಳ್ಳಾಟದ ಒಂದೇ ಒಂದು ಸುಳಿವು ಪೊಲೀಸರಿಗೆ, ಚುನಾವಣಾ ಅಧಿಕಾರಿಗಳಿಗೆ ದೊರೆಯುವುದೇ ಇಲ್ಲ. ಏನಿದ್ದರೂ ಅಲ್ಲಲ್ಲಿ ಯಾರೋ ಅಪರಿಚಿತರು ಸಾಗಿಸುವ ಬ್ಯಾಂಕಿನ ಹಣ, ಗೊತ್ತಿಲ್ಲದೇ ಮನೆಯಿಂದ ತಂದಿರುವ ಹಣ ವಶಕ್ಕೆ ತೆಗೆದುಕೊಂಡು, ಭಾರೀ ಅಕ್ರಮ ಸಾಗಾಣಿಕೆ ತಡೆದುದಾಗಿ ಹೇಳಿಕೆ ನೀಡುವುದಷ್ಟೇ ಇವರ ಕೆಲಸ. ವಶಕ್ಕೆ ಪಡೆದ ಹಣ ಯಾವ ಅಭ್ಯರ್ಥಿಯದು, ಆತ ಮಾಡಿದ ತಪ್ಪಿಗೆ ಶಿಕ್ಷೆ ಏನು ಎಂಬುದು ವರದಿಯಾಗುವುದಿಲ್ಲ.
ಈಗ ನಾಮಪತ್ರ ಸಲ್ಲಿಸಿರುವವರಲ್ಲಿ ಒಬ್ಬ ಸಚಿವರ ಆಸ್ತಿ ಒಂದೇ ಅವಧಿಯಲ್ಲಿ ಎಂಟು ಪಟ್ಟು ಹೆಚ್ಚಿದೆಯಂತೆ. ಒಂದು ಕಾಲಕ್ಕೆ ರೌಡಿಶೀಟರ್ ಆಗಿದ್ದ ಇವರು, ಮಂತ್ರಿ ಆದ ಮೇಲೆ ಕೂಡ ಇವರ ಫೋಟೋ ಸಂಬಂಧಿಸಿದ ಪೊಲೀಸ್ ಸ್ಟೇಷನ್‍ನಲ್ಲಿ ರಾರಾಜಿಸುತ್ತಿತ್ತು. ಕೊನೆಗೆ ಇದು ಪತ್ರಿಕೆಗಳಲ್ಲೂ ಸುದ್ದಿ ಆದ ಮೇಲೆ ಸ್ಟೇಷನ್‍ನವರು ಎಚ್ಚೆತ್ತುಕೊಂಡರು. ಇವರಿಗೆ ಸ್ವಂತದ ಉದ್ಯಮ ಎಂಬುದೇನೂ ಇಲ್ಲ. ಆದರೂ ಇವರ ಆಸ್ತಿ ಎಂಟು ಪಟ್ಟು ಹೆಚ್ಚಾಗಿದೆ ಎಂದರೆ ಎಂಥ ಚಮತ್ಕಾರ ಅಲ್ಲವೇ? ಅದಕ್ಕೇನೇ ಜನ ರಾಜಕೀಯ ಸೇರಬೇಕು ಎಂದು ಬಡಿದಾಡುವುದು.
ಇನ್ನೊಬ್ಬರು ಒಂದು ರಾಜಕೀಯ ಪಕ್ಷದ ರಾಜ್ಯಾಧ್ಯಕ್ಷರು. ಇವರ ಆಸ್ತಿ ಎರಡು ಪಟ್ಟು ಆಗಿದೆಯಂತೆ. ಅವರ ಮೇಲೆ ಸಿಬಿಐ ಅಕ್ರಮ ಆಸ್ತಿ ಪ್ರಕರಣ ಹಾಕಿದ್ದು, ಪ್ರಕರಣದ ಅಂತಿಮ ತೀರ್ಪು ಸದ್ಯದಲ್ಲಿಯೇ ಬರುವ ನಿರೀಕ್ಷೆ ಇದೆ. ಇದಲ್ಲದೇ ಸಾವಿರಾರು ಕೋಟಿ ಆಸ್ತಿ ಇರುವವರು ಕೂಡ ಈ ಬಾರಿ ಸ್ಪರ್ಧೆಗೆ ಇಳಿದಿದ್ದಾರೆ. ಬಹುಷಃ ಅವರ ಆಸ್ತಿ ಕೂಡ ಹೀಗೆ ಹಲವು ಪಟ್ಟು ಹಿಗ್ಗಿದ ಸುದ್ದಿ ಮುಂದಿನ ಚುನಾವಣೆ ವೇಳೆಗೆ ಬರಬಹುದು. ಬಹುಶ: ಮೋದಿ ಅವರು ಹೇಳುತ್ತಿದ್ದ ‘ಅಚ್ಛೇ ದಿನ್’ ಇವರ ಪಾಲಿಗೇನೇ ಇರಬಹುದು. ಅದೇ ಮಾತು ಸಾಮಾನ್ಯ ಜನರ ವಿಚಾರದಲ್ಲಿ ಹೇಳುವ ಹಾಗಿಲ್ಲ. ದಿನವೆಲ್ಲ ದುಡಿದರೂ ಮಕ್ಕಳ ಫೀಸು, ಬಾಡಿಗೆ, ಏರುತ್ತಿರುವ ಪೆಟ್ರೋಲ್, ದಿನಸಿ, ವಿದ್ಯುತ್ ಮತ್ತು ಹಾಲಿನ ಬಿಲ್ ತೆರುವುದರಲ್ಲಿ ಸುಸ್ತಾಗಿ ಹೋಗುತ್ತಾರೆ. ಇನ್ನೂ ಕೆಲವರು ಇದ್ದ ಕೆಲಸ ಕಳೆದುಕೊಂಡು ಬರಿಗೈಯಲ್ಲಿ ನಿಂತಿದ್ದಾರೆ. ಕೊರೋನಾ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಕೆಲವರು ದೇವರ ಪಾದ ಸೇರಿಕೊಂಡ ಕಾರಣ ಅವರ ಕುಟುಂಬದವರು ನಾನಾ ರೀತಿಯ ಕಷ್ಟ ಕಾರ್ಪಣ್ಯಗಳನ್ನು ಎದುರಿಸುವಂತಾಗಿದೆ. ಇದೇ ಕೊರೋನಾ ಸಂಕಟದ ಸಮಯದಲ್ಲಿ ಜನರ ನೆರವಿಗೆ ಎಂದು ತೆಗೆದಿರಿಸಿದ ಹಣವನ್ನು ಸಿಕ್ಕಾಪಟ್ಟೆ ಲೂಟಿ ಹೊಡೆದು ಶ್ರೀಮಂತ ಆಗಿರುವವರು ರಾಜಕೀಯದ ಹೊಳಪು ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಇದು ಸಾಲದೆಂಬಂತೆ ಇವರೆಲ್ಲ ಅವಧಿ ಪೂರೈಸಿದ ಮೇಲೆ ಪುನರಾಯ್ಕೆ ಆಗದೇ ಹೋದರೂ ಜೀವನದ ಉದ್ದಕ್ಕೂ ಪೆನ್ಷನ್ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎಲ್‍ಐಸಿಯ ಜಾಹೀರಾತು ಹೇಳುವಂತೆ ‘ಜಿಂದಗೀ ಕೆ ಸಾಥ ಭೀ, ಜಿಂದಗೀ ಕೆ ಬಾದ್ ಭೀ’ ಎನ್ನುವಂತೆ ನಾನಾ ಐಷಾರಾಮಗಳನ್ನು ಪಡೆಯುವ ಇವರ್ಯಾರಿಗೂ ಜನರ ಕಷ್ಟ ತಗ್ಗಿಸುವ ಒಂದೇ ಒಂದು ಯೋಚನೆಯೂ ಬರುವುದಿಲ್ಲ ಎಂಬುದು ಆಶ್ಚರ್ಯದ ಸಂಗತಿಯೇ ಅಲ್ಲ.
ದಿನ ಬೆಳಗಾದರೆ ಏರುವ ಇಂಧನ ಬೆಲೆ ತಗ್ಗಿಸಿ ಎಂದು ಇವರ್ಯಾರೂ ಹೋರಾಟಕ್ಕೆ ಇಳಿಯುವುದಿಲ್ಲ. ಹಿಂದೊಮ್ಮೆ ಇಂಧನ ಬೆಲೆ ಏರಿಕೆ ವಿರೋಧಿಸಿ ಸಿಲಿಂಡರ್ ಹೊತ್ತು ಕುಣಿದಿದ್ದ ಮಹಾನ್ ಮಹಿಳೆ ಈಗ ಬೆಲೆ ಏರಿಸುವ ಸರ್ಕಾರದ ಪರ ನಿಂತಿರುವುದು ಮಹತ್ವದ ಬದಲಾವಣೆ. ಅದರಂತೆ 30 ರೂಪಾಯಿಗಳಿಗೆ ಪೆಟ್ರೋಲ್ ಕೊಡಿಸುವುದಾಗಿ ಜನರಿಗೆ ಭರವಸೆ ನೀಡಿದ್ದ ಬಾಬಾ ಈಗ ದೇಶದ ಬಹುದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. ಬಹುಷಃ ರಾಜಕೀಯ ಮಂದಿಗೆ ಬೆಲೆ ಏರಿಕೆ ಬಿಸಿ ತಟ್ಟುವುದೇ ಇಲ್ಲ ಎಂದು ಕಾಣುತ್ತದೆ. ಇವರಿಗೆ ಸಲೀಸಾಗಿ ಹಣ ಹರಿದು ಬರುವುದರಿಂದ ಜನ ಕೂಡ ಹೀಗೆಯೇ ಸುಖದಿಂದ ಇದ್ದಾರೆ ಎಂದು ಬಡ ಕೂಲಿಯವರು, ಕಾರ್ಮಿಕರು ಅಗ್ಗದ ದರದಲ್ಲಿ ಆಹಾರ ಪಡೆಯುತ್ತಿದ್ದ ಇಂದಿರಾ ಕ್ಯಾಂಟೀನ್ ಹಾಳುಗೆಡವುತ್ತಾರೆ. ಪಡಿತರದಲ್ಲಿ ನೀಡುತ್ತಿದ್ದ ಅಕ್ಕಿ ಪ್ರಮಾಣ ಕಡಿತ ಮಾಡುತ್ತಾರೆ.
ಹಿರಿಯ ಮಂತ್ರಿಯೊಬ್ಬ 40% ಕಮೀಷನ್ ವಿಷಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಮತ್ತು ತಮ್ಮದೇ ಪಕ್ಷದ ಶಾಸಕ ಕೋಟಿಗಟ್ಟಲೇ ಲಂಚ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದು ಕೂಡಲೇ ಸಿಕ್ಕ ಜಾಮೀನು ಪಡೆದು ಬಂದಾಗ ಆತ ಯುದ್ಧ ಗೆದ್ದು ಬಂದವರಂತೆ ಜನ ಹಾರ ಹಾಕಿ ಮೆರವಣಿಗೆ ಮಾಡಿ ಸ್ವಾಗತಿಸುತ್ತಾರೆ. ಇಷ್ಟೆಲ್ಲ ನಡೆದರೂ ನಮ್ಮ ಮುಖ್ಯಮಂತ್ರಿಗಳು ಎದುರು ಪಕ್ಷದವರನ್ನು ದುರ್ಜನರು ಎಂದು, ತಮ್ಮ ಗುಂಪಿನವರನ್ನು ಸಜ್ಜನರು ಎಂದು ಬಣ್ಣಿಸಿಕೊಳ್ಳುತ್ತಾರೆ.
ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆ ಮಾತಿತ್ತು. ಆದರೆ ಒಂದೇ ಒಂದು ಕೆಲಸ ಮಾಡದೇ ವಂಶ ಪಾರಂಪರ್ಯವಾಗಿ ಕೂತು ಉಣ್ಣುತ್ತಲೇ ಇರುವ ರಾಜಕೀಯ ಮಂದಿಯ ರಹಸ್ಯ ಈಗಷ್ಟೇ ಬಯಲಾಗಬೇಕಿದೆ. ಹೀಗೆ ವಂಶದಲ್ಲಿಯೇ ಕೂತು ಉಣ್ಣುವವರ ಸರಪಳಿ ಬೆಳೆಯುತ್ತಾ ಹೋದಲ್ಲಿ ಮುಂದೆ ಕೆಲಸ ಮಾಡುವವರೇ ಇಲ್ಲದೇ ಕೇವಲ ಕೂತು ಉಣ್ಣುವವರೇ ಇರುತ್ತಾರೆ ಎಂದು ಪ್ರಧಾನಿ ಅವರು ಕುಟುಂಬ ವಾದಕ್ಕೆ ಪ್ರೋತ್ಸಾಹ ನೀಡಬೇಡಿ ಎಂದು ಕಳಕಳಿಯಿಂದ ತಮ್ಮ ಭಾಷಣದಲ್ಲಿ ಹೇಳುತ್ತಾ ಬಂದಿದ್ದಾರೆ. ಆದರೆ ಇಂಥ ಕೂತು ಉಣ್ಣುವವರ ಕುಟುಂಬಗಳ ಬೆಂಬಲ ಇಲ್ಲದೇ ಹೋದಲ್ಲಿ ಅವರ ಸರ್ಕಾರ ಬರುತ್ತಲೂ ಇರಲಿಲ್ಲ ಮತ್ತು ಇರುತ್ತಲೂ ಇರಲಿಲ್ಲ ಎಂದು ಅವರಿಗೂ ಚೆನ್ನಾಗಿ ಗೊತ್ತಿದೆ. ಆದರೂ ತಾವು ಊದುವ ಶಂಖ ಊದಬೇಕು ಎನ್ನುವುದು ಕೂಡ ಅವರಿಗೆ ತಿಳಿದಿದೆ. ಜೊತೆಗೆ ತಾವು ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡುವ ವಿಚಾರವನ್ನೂ ಅವರು ಜನರಿಗೆ ಆಗಾಗ ತಿಳಿಯುವಂತೆ ನೋಡಿಕೊಳ್ಳುತ್ತಾರೆ. ಆದರೆ ಈ ಹದಿನೆಂಟು ತಾಸಿನಲ್ಲಿ ಏನೇನು ಮಾಡುತ್ತಾರೆ ಎಂಬ ವಿವರ ಮಾತ್ರ ಲಭ್ಯವಿಲ್ಲ.
ರಾಜ್ಯದಲ್ಲಿ ಎದ್ದಿರುವ ಸಂಭ್ರಮದ ಅಲೆ ಗಮನಿಸಿದರೆ ಜನತೆಗೆ ಯಾವುದೇ ತರಲೆ ತಾಪತ್ರಯಗಳೇ ಇಲ್ಲ, ಅವರೆಲ್ಲ ಭಾರೀ ಸುಖದಲ್ಲಿ ಮುಳುಗಿ ತೇಲುತ್ತಿದ್ದಾರೆ ಎಂಬ ಭಾವನೆ ಬರುತ್ತದೆ. ತಮ್ಮ ನಾಯಕರನ್ನು ಮೆರವಣಿಗೆಯಲ್ಲಿ ಕರೆದೊಯ್ದು ನಾಮಪತ್ರ ಸಲ್ಲಿಸುವುದೇನು, ನಾಮಪತ್ರ ಸಲ್ಲಿಸಿದವರು ಡಿಜೆಗಳನ್ನು ಇಟ್ಟುಕೊಂಡು ಹಾಡುಗಳನ್ನು ಹಾಡಿಸುತ್ತಾ ಜನರನ್ನು ಗುಡ್ಡ ಹಾಕಿಕೊಂಡು ಕುಣಿಯುವುದೇನು, ರಸ್ತೆಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದೇನು ಎಲ್ಲವೂ ರಾಜಾರೋಷವಾಗಿ ನಡೆಯುತ್ತದೆ. ಜನರಿಗೂ ಇದೆಲ್ಲ ರೂಢಿಯಾದಂತಿದೆ. ಕೇವಲ ನಾಮಪತ್ರ ಸಲ್ಲಿಸಲು ಈ ರೀತಿ ಸಾವಿರಾರು ಜನರನ್ನು ಸೇರಿಸಿ ರಸ್ತೆ ಸಂಚಾರಕ್ಕೆ, ನಾಗರಿಕರಿಗೆ ತೊಂದರೆ ಕೊಡುವುದು ಸರಿಯೇ ಎಂದು ಯೋಚಿಸುವುದೇ ಇಲ್ಲ.
ಇದೆಲ್ಲ ನೋಡಿದರೆ, ಇನ್ನೂ ಒಂದೆರಡು ಶತಮಾನ ಹೋದರೂ ನಮಗೆ ಬುದ್ಧಿ ಬರುವುದಿಲ್ಲ, ನಮ್ಮ ತಲೆ ಮೇಲೆ ಹತ್ತಿ ಕುಳಿತು ಸವಾರಿ ಮಾಡುವವರು ಕೆಳಗಿಳಿಯುವ ಯೋಚನೆಯಲ್ಲಿಯೇ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅವರು ರಾಜಾರೋಷವಾಗಿ ಕೂತು ಉಣ್ಣುತ್ತಲೇ ಹಲವು ಪಟ್ಟು ಆಸ್ತಿ ಹೆಚ್ಚಿಸಿಕೊಳ್ಳುತ್ತ ಇರುತ್ತಾರೆ, ನಾವು ಮಾತ್ರ ನಿತ್ಯ ಪರದಾಡಿದರೂ ನೆಮ್ಮದಿಯಿಂದ ಊಟ ಮಾಡಿ ಸುಖದ ನಿದ್ರೆಗೆ ಜಾರುವುದು ಮಾತ್ರ ಕನಸಾಗಿದೆ. ಎಂಥ ಚಂದದ ದೇಶವನ್ನು ನಾವು ಎಲ್ಲಿಗೆ ತಂದಿದ್ದೇವೆ ಅಲ್ಲವೇ?
-ಎ.ಬಿ.ಧಾರವಾಡಕರ