ಕಾರವಾರ, ೧- ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ-ಕೈಗಾ-ಬಾರೆ-ಯಲ್ಲಾಪುರ ರಸ್ತೆಯಲ್ಲಿ ಹುಲಿಯೊಂದು ಕಾರಿನ ಪಕ್ಕದಲ್ಲಿಯೇ ಕಾಣಿಸಿಕೊಂಡಿದ್ದು, ಇದರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾರಿನಲ್ಲಿದ್ದ ಕೈಗಾ ಎನ್ಪಿಸಿಐಎಲ್ ಉದ್ಯೋಗಿ ಚೇತನ ತೇಲ್ಕರ ಎಂಬವರು ಹುಲಿ ಕಾಣಿಸಿಕೊಂಡಿದ್ದನ್ನು ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಬೃಹತ್ ಗಾತ್ರದ ಹುಲಿ ರಸ್ತೆ ಬದಿಯಲ್ಲೇ ನಿಂತು ಕಾರಿನಲ್ಲಿದ್ದವರನ್ನು ನೋಡಿ ಘರ್ಜಿಸಿ, ಕಾರನ್ನು ಹಿಂಬಾಲಿಸಿದಂತೆ ಮಾಡಿದ ಹುಲಿ ನಂತರ ಕೆಲವೇ ಕ್ಷಣದಲ್ಲಿ ಕಾಡಿನಲ್ಲಿ ಮರೆಯಾಗಿದೆ.
“ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ” ದ ಬಫರ್ ವಲಯ ಇದಾಗಿದೆ. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹುಲಿಗಳಿವೆ. ಈ ಹಿಂದೆಯೂ ಆಗಾಗ ರಸ್ತೆಯಲ್ಲಿ ಹುಲಿಗಳು ಕಾಣಿಸಿಕೊಂಡಿದ ವರದಿಗಳು ಬಂದಿದ್ದವು. ಈ ಮಾರ್ಗವು ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಯಲ್ಲಾಪುರಕ್ಕೆ ತಲುಪಬಹುದಾದ ದಟ್ಟ ಕಾಡಿನ ಮಧ್ಯದ ರಸ್ತೆಯಾಗಿದೆ.
ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಓಡಾಡುವ ಹುಲಿಗಳು ವರ್ಷಕ್ಕೆ ಒಂದೆರಡು ಸಲ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ತೆರಳುವ ಉದ್ಯೋಗಿಗಳು ಹಾಗೂ ಈ ಭಾಗದಿಂದ ಯಲ್ಲಾಪುರಕ್ಕೆ ಹೋಗುವವರು ಇದೇ ಮಾರ್ಗದಲ್ಲಿ ಸಾಗುತ್ತಾರೆ. ಅವರಿಗೆ ಆಗಾಗ್ಗೆ ಹುಲಿ- ಚಿರತೆಗಳು ವಾಹನ ಸವಾರರಿಗೆ ಕಾಣಿಸಿಕೊಳ್ಳುತ್ತವೆ.