ಕಳೆದ ಒಂದು ತಿಂಗಳಲ್ಲಿ ವನ್ಯ ಜೀವಿಗಳ ದಾಳಿಯಲ್ಲಿ ನಾಲ್ಕು ಜನ ರಾಜ್ಯದಲ್ಲಿ ಅಸು ನೀಗಿದ್ದಾರೆ. ಇದು ವನ್ಯ ಜೀವಿ ಮತ್ತು ನಾಗರಿಕ ಸಮಾಜದ ನಡುವಣ ಸಂಘರ್ಷದ ಒಂದು ಸಣ್ಣ ಸ್ಯಾಂಪಲ್ ಮಾತ್ರ. ಕೆಲವು ತಿಂಗಳ ಹಿಂದೆ ಬೆಳಗಾವಿ ನಗರದ ಹೃದಯಭಾಗ ಕ್ಯಾಂಪ್ ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆಯಿಂದ ಜನತೆ ಆತಂಕಗೊಂಡಿದ್ದು ನೆನಪಾದರೆ, ಈ ಸಂಘರ್ಷ ಹೇಗೆಲ್ಲ ನಿತ್ಯದ ಜೀವನಕ್ಕೆ ಕುತ್ತು ತರುತ್ತದೆ, ಕೆಲವೊಮ್ಮೆ ಜೀವ ಹಾನಿಗೂ ಕಾರಣಾಗುತ್ತದೆ ಎಂಬುದು ತಿಳಿದೀತು. ಆ ಚಿರತೆ ಹಿಡಿಯಲೆಂದು ಅರಣ್ಯ ಇಲಾಖೆ ಸಿಬ್ಬಂದಿ ಪರದಾಡಿದ್ದು ಕೂಡ ನೆನಪಿಗೆ ಬರಬಹುದು. ಅಷ್ಟೇನೂ ದಟ್ಟ ಮಲೆನಾಡು ಅಲ್ಲದ ಬೆಳಗಾವಿ ಪ್ರದೇಶದಲ್ಲಿಯೇ ಇಂಥ ಅನಾಹುತ ಜರುಗಬೇಕಾದರೆ ಉಳಿದ ಕಡೆ ಹೇಗೆಲ್ಲ ನಡೆಯುತ್ತ ಇರಬಹುದು ಎಂದು ಊಹಿಸಬಹುದು.
ಜ. 25 ರಂದು ಬೆಳಗಾವಿ ಜಿಲ್ಲೆಯ ಖಾನಾಪುರದ ಗಡಿ ಗ್ರಾಮಕ್ಕೆ ಮೂರು ಕಾಡಾನೆಗಳು ಬಂದು ರೈತರ ಬೆಳೆ ಹಾನಿ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೊಡಗು ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ಸುತ್ತಮುತ್ತ ಕಾಡಾನೆಗಳ ಹಾವಳಿ ವರದಿ ಸಾಮಾನ್ಯ. ಅವು ತಿನ್ನುವ ಸಸ್ಯ ಉತ್ಪನ್ನಗಳಿಗಿಂತ ಹಾಳು ಮಾಡುವುದು ಹೆಚ್ಚು. ರೈತನೊಬ್ಬನ ಇಡೀ ವರ್ಷದ ಫಸಲನ್ನು ಅವು ಒಂದೇ ರಾತ್ರಿ ಅಥವಾ ಹಗಲಲ್ಲಿ ನಾಶ ಮಾಡಬಲ್ಲವು. ಇದು ವನ್ಯ ಜೀವಿಗಳ ಪಾಲಿನ ಘೋರ ಅಪರಾಧ ಎಂದು ಪರಿಗಣಿಸುವಂತಿಲ್ಲ. ಆದರೆ ನಷ್ಟ ಅನುಭವಿಸುವುದು ಕಾಡಂಚಿನ ಮತ್ತು ಹಲವು ವೇಳೆ ಕಾಡಿನಿಂದ ದೂರದ ಪ್ರದೇಶಗಳಲ್ಲಿ ಕೂಡ ಈ ಹಾವಳಿ ಸಂಭವಿಸಬಹುದು. ಬೆಂಗಳೂರಂಥ ನಗರದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಕಾಣಿಸಿಕೊಂಡ ಚಿರತೆಯಿಂದ ಉಂಟಾಗಿದ್ದ ಭಯದ ವಾತಾವರಣ ನೆನೆಸಿಕೊಂಡರೆ, ವನ್ಯ ಜೀವಿಗಳಿಗೆ ಅಂಥ ಗಡಿಗಳೇನೂ ಇಲ್ಲ ಎನ್ನುವುದು ಅರಿವಾದೀತು.
ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿರುವ ಕಾಡಿನ ಒತ್ತುವರಿ ಒಂದೆಡೆಯಾದರೆ ದುರಾಸೆಯಿಂದ ಕೃಷಿ ಭೂಮಿ ವಿಸ್ತರಿಸಿಕೊಳ್ಳುವ ಅಕ್ರಮ ಸಾಗುವಳಿ ಇನ್ನೊಂದು ಕಡೆ. ಇದರಿಂದ ದಿನೇ ದಿನೇ ಕಾಡಿನ ಗಾತ್ರ ಕುಗ್ಗುತ್ತಿದೆ. ಜೊತೆಗೇ ಕಾಡಿನ ಒಳಗೆ ವಾಸಿಸುವ ಜೀವಿಗಳ ನೆಮ್ಮದಿಗೆ ಭಂಗ ತರುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಕಾಡಿನ ನಡುವೆ ಹೆದ್ದಾರಿಗಳನ್ನು ನಿರ್ಮಿಸಿದ ಪರಿಣಾಮ ವಾಹನ ಮತ್ತು ಜನಸಂಚಾರದಿಂದ ಹಗಲು ನಿದ್ರೆ ಮಾಡುವ ಕಾಡಿನ ಜೀವಿಗಳಿಗೆ ವಿಶ್ರಾಂತಿ ದೊರೆಯದಂತಾಗಿದೆ. ಇದಲ್ಲದೇ ಕಾಡಿನ ಮಧ್ಯೆ ತಲೆ ಎತ್ತಿರುವ ರೆಸಾರ್ಟಗಳಿಗೆ ಧಾವಿಸುವ ಜನರ ದೊಂಬಿಯಿಂದ ರಾತ್ರಿ ಕೂಡ ಕಾಡು ಪ್ರಾಣಿಗಳು ನೆಮ್ಮದಿಯಿಂದ ಇರುವಂತಿಲ್ಲ. ಇದರ ಜೊತೆಗೇ ಕಾಡಿಗೆ ಮತ್ತು ಕಾಡಂಚಿಗೆ ಲಗ್ಗೆ ಇಡುವ ತಿಳಿಗೇಡಿಗಳು ಅಲ್ಲಿ ಸೃಷ್ಟಿಸುವ ಕಸ ಮತ್ತು ಬೇಜವಾಬ್ದಾರಿ ವರ್ತನೆಯಿಂದ ದಿನದಿಂದ ದಿನಕ್ಕೆ ಕಾಡು ಅಪಾಯಕ್ಕೆ ಸಿಲುಕುತ್ತಿದೆ.
ನಮ್ಮ ಅಭಿವೃದ್ಧಿ ಹೆಸರಿನ ಕಾಮಗಾರಿಗಳಿಂದ ಈಗಾಗಲೇ ಸಹ್ಯಾದ್ರಿ ಗಿರಿ ಶ್ರೇಣಿ ಶಿಥಿಲ ಆಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಕೂಡ ಉತ್ತರಾಖಂಡ ಜೋಶಿಮಠದ ಹಾಗೆ ಭೂಕುಸಿತ ಸಂಭವಿಸಿದರೆ ಆಶ್ಚರ್ಯ ಏನೂ ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಾ ಇದ್ದಾರೆ. ಅದಕ್ಕೆ ಪೂರ್ವಭಾವಿ ಸೂಚನೆಯಾಗಿ ಮಳೆಗಾಲದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಂಭವಿಸುತ್ತಿರುವ ಭೂಕುಸಿತ ಮುಂದಿನ ದುರಂತದ ಸೂಚನೆ ಎಂದು ಅವರು ಹೇಳುತ್ತಾರೆ. ಒಟ್ಟಿನಲ್ಲಿ ಎಲ್ಲ ಕಡೆಯಿಂದ ಅಪಾಯ ತಂದುಕೊಳ್ಳಲು ಏನೇನು ದುಸ್ಸಾಹಸ ಮಾಡಬೇಕೋ ಅದನ್ನೆಲ್ಲ ನಮ್ಮ ದೇಶ ಮತ್ತು ರಾಜ್ಯದ ಜನರು ಮಾಡುತ್ತಿದ್ದಾರೆ. ರಾಜಕಾರಣಿಗಳು, ಆಡಳಿತ ವ್ಯವಸ್ಥೆಯ ಸಹಾಯದಿಂದ ಸಂಪೂರ್ಣ ಕಾಡನ್ನೇ ನಾಶ ಮಾಡುವ ಕೆಲಸಕ್ಕೆ ನಾವು ಇಳಿದಂತಿದೆ.
ಈಗಿನ್ನೂ ಚಳಿಗಾಲ. ಕಾಡಿನ ಹಸಿರಾಗಲೀ, ಕುಡಿಯುವ ನೀರಿಗಾಗಲಿ ಕೊರತೆ ಇರದ ಕಾಲ. ಈಗಲೇ ವನ್ಯ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಾ ಇರುವ ಪ್ರಮಾಣ ನೋಡಿದರೆ, ಮುಂದಿನ ದಿನಗಳು ಹೇಗೋ ಏನೋ ಎಂಬ ಆತಂಕ ಸಹಜ. ವನ್ಯ ಪ್ರಾಣಿಗಳಿಂದ ಅನಾಹುತ ಮತ್ತು ಜೀವಹಾನಿ ಸಂಭವಿಸಿದಾಗ ಸರ್ಕಾರವನ್ನು ದೂಷಿಸುವುದು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಗೊಣಗುವುದನ್ನು ಬಿಟ್ಟು ನಾವು ಬೇರೇನೂ ಮಾಡುತ್ತಿಲ್ಲ. ಈಗ ಘಟಿಸುತ್ತಿರುವ ಅನಾಹುತಗಳಿಗೆ ನಾವು ಕೂಡ ಕಾರಣ ಎಂಬುದನ್ನು ಮರೆಯುತ್ತಾ ಇದ್ದೇವೆ. ಕಾಡು ನಾಶ ನಿರಂತರ ನಡೆಯುತ್ತಿದ್ದರೂ ನಾವು ಮೌನವಾಗಿದ್ದೇವೆ. ಅನಾಹುತ ಸಂಭವಿಸಿದ ಸಂದರ್ಭ ಕೆಲವು ದಿನ ಭಾರೀ ಚಟುವಟಿಕೆ ಕಾಣಿಸುತ್ತದೆ, ಆನಂತರ ಎಲ್ಲವೂ ತಣ್ಣಗಾಗುತ್ತದೆ. ಮತ್ತೆ ಎಚ್ಚರಗೊಳ್ಳುವುದು ಇನ್ನೊಂದು ಅನಾಹುತ ಸಂಭವಿಸಿದ ಮೇಲೆಯೇ. ದೂರದೃಷ್ಟಿಯ ಕೊರತೆ, ಸದ್ಯದ ಲಾಭದ ಮೇಲೆ ಮಾತ್ರ ಕಣ್ಣೀಟ್ಟಿರುವ ಸರ್ಕಾರ ಮತ್ತು ಅದರ ಯೋಜನೆಗಳು ಒಂದೆಡೆಯಾದರೆ, ಈ ಯೋಜನೆಗಳಿಂದ ಮುಂದಾಗುವ ಅನಾಹುತ ಕುರಿತು ಯೋಚಿಸದ ಜನ, ಆ ಯೋಜನೆಯಿಂದ ತಾತ್ಕಾಲಿಕವಾಗಿ ದೊರೆಯುವ ಪ್ರಯೋಜನ ಮಾತ್ರ ಪರಿಗಣಿಸಿ ಸುಮ್ಮನಾಗುತ್ತಾರೆ.
ವಿದ್ಯುತ್ ತಯಾರಿಕೆಯನ್ನೇ ನೋಡಿ. ಅಗತ್ಯ ಮೀರಿ ನಗರಗಳ ಅಂಗಡಿ ಮತ್ತು ಕಟ್ಟಡಗಳ ಮೇಲೆ ಉರಿಯುವ ವಿದ್ಯುತ್ ದೀಪಗಳು ನಿಜಕ್ಕೂ ಅಗತ್ಯವೇ ಎಂದು ನಾವ್ಯಾರೂ ಯೋಚಿಸಲು ಹೋಗುವುದಿಲ್ಲ. ಬೀದಿ ದೀಪಗಳನ್ನು ಹಗಲಾದ ಮೇಲೂ ಉರಿಯಲು ಬಿಟ್ಟ ಕಾರಣ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಮಾಸಿಕ ಹೊರೆ ಆಗುತ್ತಿರುವುದನ್ನೂ ಕೂಡ ನೋಡಿದ್ದೇವೆ. ಆದರೆ ಇವ್ಯಾವೂ ನಮಗೆ ಬದುಕಿನಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳುವಂತೆ ಪ್ರೇರಿಸುವುದಿಲ್ಲ. ಆದ್ದರಿಂದಲೇ ಸರ್ಕಾರಗಳು ನೀರಾವರಿ ಮತ್ತು ವಿದ್ಯುತ್ ಉತ್ಪಾದನೆ ಹೆಸರಲ್ಲಿ ದೊಡ್ಡ ದೊಡ್ಡ ಯೋಜನೆ ಅನುಷ್ಠಾನಕ್ಕೆ ತಂದು ಕಾಡು ನಾಶ ಮಾಡುವುದಲ್ಲದೇ, ಅನಗತ್ಯ ಇಂಧನ ಬಳಕೆಗೂ ಪ್ರೋತ್ಸಾಹ ನೀಡುತ್ತವೆ. ಒಂದೆಡೆ ನಗರಗಳಿಗೆ ಎಲ್ಲ ಸವಲತ್ತು ಸಿಕ್ಕರೂ, ದೂರದ ಗ್ರಾಮೀಣ ಭಾಗಗಳಿಗೆ ವಿದ್ಯುತ್ ಸಂಪರ್ಕ ಎನ್ನುವುದು ಇನ್ನೂ ಕನಸಿನ ಮಾತು. ರಾಷ್ಟ್ರಪತಿಗಳ ತವರು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಬಂದಿದ್ದು ಅವರು ರಾಷ್ಟ್ರಪತಿ ಹುದ್ದೆ ಸ್ವೀಕರಿಸಿದ ದಿನವೇ ಎನ್ನುವುದನ್ನು ಗಮನಿಸಿದರೆ ನಮ್ಮ ರಾಜಕೀಯದ ನಾಟಕಗಳು ತಿಳಿಯುತ್ತವೆ.
ವನ್ಯ ಪ್ರಾಣಿಗಳು ನಾಡಿಗೆ ಬಂದು ದಾಳಿ ಮಾಡುತ್ತವೆ ಎಂದರೆ ಅದಕ್ಕೆ ಕೇವಲ ಒಂದೋ, ಎರಡೋ ಕಾರಣ ಇರುವುದಿಲ್ಲ. ಒಂದೆಡೆ ಕಾಡಿನ ಸಂರಕ್ಷಣೆಗೆ ಎಂದು ಅಲ್ಲಿದ್ದ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಿ, ಅವರಿಗೆ ನೆಲೆ ಇಲ್ಲದಂತೆ ಮಾಡಿರುವ ಸರ್ಕಾರಗಳು, ಇನ್ನೊಂದೆಡೆ ತನ್ನ ಯೋಜನೆಗಳ ಹೆಸರಲ್ಲಿ ಕಾಡೊಳಗಿನ ಪ್ರಾಣಿಗಳ ಬದುಕಿಗೂ ಕೊಳ್ಳಿ ಇಟ್ಟಿವೆ. ಹಾಗಿದ್ದೂ ಯಾವೊಂದು ಕ್ರಿಯಾತ್ಮಕ ಕೆಲಸ ಸರ್ಕಾರದಿಂದ ನಡೆಯುವುದಿಲ್ಲ ಮತ್ತು ನಮ್ಮ ಜನ ಇದರ ದುಷ್ಪರಿಣಾಮ ಗಮನಿಸಿ ಕೂಡ ಪ್ರತಿಭಟಿಸುವುದೂ ಇಲ್ಲ. ಈಗೀಗ ಸರ್ಕಾರಗಳು ಎಷ್ಟು ಮುಂದೆ ಹೋಗಿವೆ ಎಂದರೆ, ಜೋಶಿಮಠದ ವಾಸ್ತವ ಕುರಿತಂತೆ ತಂತ್ರಜ್ಞರು ಮತ್ತು ವಿಜ್ಞಾನಿಗಳು ಬಾಯಿ ತೆರೆಯಬಾರದು ಎಂದು ಸೂಚನೆ ನೀಡಿವೆ. ಇಂಥ ಸ್ಥಿತಿಯಲ್ಲಿ ಸರ್ಕಾರಗಳಿಂದ ಒಳಿತಾಗುತ್ತದೆ ಎಂದು ನಂಬುವುದಾದರೂ ಹೇಗೆ? ರಾಜ್ಯದಲ್ಲಿ ವನ್ಯ ಪ್ರಾಣಿಗಳ ದಾಳಿಯಿಂದ ನಡೆದಿರುವ ಇತ್ತೀಚಿನ ನಾಲ್ಕು ಸಾವುಗಳ ಹಿಂದೆ ಬಹುದೊಡ್ಡ ಅನರ್ಥಗಳ ಪರಂಪರೆಯೇ ಇದೆ. ಅದನ್ನು ಗಮನಿಸದೇ ಕೇವಲ ತರಚು ಗಾಯಕ್ಕೆ ಮಲಾಮು ಬಳಿದ ಹಾಗೆ ಮಾಡುತ್ತಾ ಹೋದರೆ ಮುಂದೊಂದು ದಿನ ನಾಡೇ ಕಾಡಾಗುವ ಅಪಾಯವೂ ಇರುತ್ತದೆ.
-ಎ.ಬಿ.ಧಾರವಾಡಕರ