ಬೆಳಗಾವಿ, 15: ನಗರದಲ್ಲಿ ಮತ್ತೊಂದು ಬಹುಕೋಟಿ ಹೂಡಿಕೆ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಅಪೆಕ್ಸ್ ಬಿಜ್ ಕಾರ್ಪ್ ಎಲ್‌ಎಲ್‌ಪಿ ಸಂಸ್ಥೆ ವಿರುದ್ಧ ₹160 ಕೋಟಿ ವಂಚನೆ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 13ರಂದು ಅಶೋಕ ಬಿಸಗುಪ್ಪಿ ಎಂಬುವರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾವಿರಾರು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡ ಆರೋಪಿಗಳು ಮಾಸಿಕ 4% ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಹಣ ಸಂಗ್ರಹಿಸಿದ್ದರು. ಹೂಡಿಕೆದಾರರಿಗೆ ಹ್ಯಾಂಡ್ ಲೋನ್ ಒಪ್ಪಂದ ಹಾಗೂ ಚೆಕ್ ನೀಡಿದ್ದರೂ, ಬಳಿಕ ಹಣ ಮರುಪಾವತಿಸದೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದಲ್ಲಿ ಕಾಶಿನಾಥ ವಾಗ್ಮರೆ, ಅವರ ಪತ್ನಿ, ಗಣೇಶ ಬಂಡಾರಿ, ಅವರ ಪತ್ನಿ ಸೇರಿದಂತೆ ಹಲವರು ಭಾಗಿಯಾಗಿರುವ ಆರೋಪವಿದೆ. ವಂಚನೆಯ ಮೊತ್ತ ₹50 ಕೋಟಿಗೂ ಅಧಿಕ ಇರುವುದರಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪರಾರಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.