ಬೆಂಗಳೂರು, 15: ರಾಜ್ಯ ಸರ್ಕಾರವು ಕಂದಾಯ ಇಲಾಖೆಯಲ್ಲಿ ಭಾರಿ ಮಟ್ಟದ ಆಡಳಿತಾತ್ಮಕ ಪುನರ್ ವ್ಯವಸ್ಥೆ ಕೈಗೊಂಡಿದ್ದು, ತಹಶೀಲ್ದಾರ ಗ್ರೇಡ್-1 ಹಾಗೂ ಗ್ರೇಡ್-2 ಅಧಿಕಾರಿಗಳು ಸೇರಿದಂತೆ 30ಕ್ಕೂ ಹೆಚ್ಚು ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ, ಸ್ಥಳನಿಯುಕ್ತಿ ಹಾಗೂ ಕೆಲವರ ಹಿಂದಿನ ಆದೇಶಗಳಲ್ಲಿ ಮಾರ್ಪಾಡು ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಜಿ.ಕೆ. ಅವರ ಸಹಿಯೊಂದಿಗೆ ಪ್ರಕಟಗೊಂಡಿರುವ ಆದೇಶದಲ್ಲಿ ವಿವಿಧ ಜಿಲ್ಲೆಗಳ ತಾಲೂಕು ಕಚೇರಿಗಳು, ಪ್ರಾದೇಶಿಕ ಆಯುಕ್ತರ ಕಚೇರಿಗಳು, ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗಳು, ಜಿಲ್ಲಾ ತರಬೇತಿ ಸಂಸ್ಥೆಗಳು ಹಾಗೂ ಇತರ ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಆದೇಶದಂತೆ ಮೈಸೂರು ವಿಭಾಗದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವಿಶೇಷ ತಹಶೀಲ್ದಾರ ಕೀರ್ತನ ಕೆ.ಆರ್ ಅವರನ್ನು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಗೆ ವರ್ಗಾಯಿಸಲಾಗಿದೆ. ಕಮಲಾಪುರ ತಾಲೂಕಿನ ತಹಶೀಲ್ದಾರ ಗ್ರೇಡ್-1 ಮಹಮದ್ ಮೊಹಸೀನ್ ಅವರ ಹಿಂದಿನ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ, ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಜಿ. ಗಣೇಶ ಸವಣೂರೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿಗೆ ತಹಶೀಲ್ದಾರ ಗ್ರೇಡ್-1 ಆಗಿ ನಿಯುಕ್ತಿಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವಿಶೇಷ ತಹಶೀಲ್ದಾರ ಜೆ. ರವೀಂದ್ರ ರೆಡ್ಡಿ ಅವರನ್ನು ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರ್ಗಾಯಿಸಲಾಗಿದ್ದು, ವೆಂಕನಗೌಡ ಅವರನ್ನು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ವರ್ಗಾಯಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಿ.ಆರ್. ಮುನಿವೆಂಕಟಪ್ಪ ಅವರನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿಗೆ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಕೇಶ್ ಫ್ರಾನ್ಸಿಸ್ ಅವರನ್ನು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿಗೆ, ದಾವಣಗೆರೆಯ ಎಚ್.ಬಿ. ಹಾಲೇಶ ಅವರನ್ನು ದಾವಣಗೆರೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಹಾಗೂ ಪಿ.ಎಂ. ದೊಡ್ಡಮನಿ ಅವರನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿಗೆ ವರ್ಗಾಯಿಸಲಾಗಿದೆ.
ವಿಜಯಪುರ ತಾಲೂಕಿನ ಜಿ.ಎಸ್. ನಾಯಕ ಅವರನ್ನು ಇಂಡಿ ರೈಲ್ವೆ ನಿಲ್ದಾಣದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ, ಕಲಬುರಗಿ ಜಿಲ್ಲೆಯ ವೆಂಟಕೇಶ ಶರಣಪ್ಪ ಅವರನ್ನು ಕಮಲಾಪುರ ತಾಲೂಕಿಗೆ, ಭೀಮಣ್ಣ ಗುಂಡಪ್ಪ ಕುದ್ರಿ ಅವರನ್ನು ಕಲಬುರಗಿ ತಾಲೂಕಿಗೆ, ಮುರಳಿಧರ್ ಅವರನ್ನು ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯರ ಹುದ್ದೆಗೆ ಹಾಗೂ ಗಂಗಾಧರ ಪಾಟೀಲ್ ಅವರನ್ನು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ್ ಆಗಿ ವರ್ಗಾಯಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೆ. ಸುರೇಶ ಅವರನ್ನು ಭದ್ರಾವತಿ ತಾಲೂಕಿಗೆ, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಪರಶುರಾಮಪ್ಪ ಬಿ ಅವರನ್ನು ದಾವಣಗೆರೆ ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯರ ಹುದ್ದೆಗೆ ವರ್ಗಾಯಿಸಲಾಗಿದೆ. ಹಾಸನ ತಾಲೂಕಿನ ಎಂ.ಎ. ನಾಗರಾಜ್ ಅವರಿಗೆ ಈ ಹಿಂದೆ ನೀಡಲಾಗಿದ್ದ ಆಲೂರು ತಾಲೂಕಿನ ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಹಾಸನ ತಾಲೂಕು ಕಚೇರಿಯಲ್ಲಿಯೇ ಮುಂದುವರಿಸಲಾಗಿದೆ.
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ವಿಜಯೇಂದ್ರ ಎಸ್. ಹುಲಿನಾಯಕ ಅವರನ್ನು ಕಚೇರಿ ಸಹಾಯಕರಾಗಿ, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಂದ್ರಶೇಖರ ಎ.ಎಸ್ ಅವರನ್ನು ಮೈಸೂರು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವಿಶೇಷ ತಹಶೀಲ್ದಾರ ಆಗಿ, ಬಾಗಲಕೋಟ ತಾಲೂಕಿನ ಮಹಾದೇವಪ್ಪಗೌಡ ಬಿರಾದಾರ ಅವರನ್ನು ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಗೆ, ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಗೀತಾ ಟಿ.ಆರ್ ಅವರನ್ನು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿಗೆ ಹಾಗೂ ಕೋಲಾರ ತಾಲೂಕಿನ ಹನ್ನಾ ಮರಿಯ ಅವರನ್ನು ಬಂಗಾರಪೇಟೆ ತಾಲೂಕಿಗೆ ವರ್ಗಾಯಿಸಲಾಗಿದೆ.
ಹಾಸನ ಜಿಲ್ಲೆಯ ಸಕಲೇಪುರ ತಾಲೂಕಿನ ಎಸ್. ಎಚ್. ಬಾಲಚಂದ್ರ ಅವರನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದ್ರಕಾಂತ ಗಜಾನನ ನಾಯ್ಕ ಅವರನ್ನು ಶಿರಸಿ ಉಪವಿಭಾಗಾಧಿಕಾರಿಗಳ ಕಚೇರಿಗೆ ವರ್ಗಾಯಿಸಲಾಗಿದೆ.
ಸ್ಥಳ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳಿಗೂ ಸರ್ಕಾರ ಹೊಸ ನಿಯುಕ್ತಿ ನೀಡಿದೆ. ಡಾ. ದೊಡ್ಡಪ್ಪ ಹೂಗಾರ ಅವರನ್ನು ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿಗೆ ತಹಶೀಲ್ದಾರ ಗ್ರೇಡ್-1 ಆಗಿ, ಡಾ. ಅಶ್ವಥ ಎಂ.ಬಿ ಅವರನ್ನು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಆಡಳಿತಾಧಿಕಾರಿಯಾಗಿ, ಎಚ್.ಎನ್. ರಾಮಚಂದ್ರ ಅವರನ್ನು ಬೆಂಗಳೂರಿನ ಬಿ.ಎಂ.ಆರ್.ಸಿ.ಎಲ್. ಕಚೇರಿಗೆ, ಬಿ.ಎಸ್. ಕಡಕಭಾವಿ ಅವರನ್ನು ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಗೆ, ಪ್ರಕಾಶ ಹೊಳೆಪ್ಪಗೋಳ ಅವರನ್ನು ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ, ಸುರೇಶ ಜಿ. ಬಾಲೇಹೊಸೂರು ಅವರನ್ನು ಗದಗ ಉಪವಿಭಾಗಾಧಿಕಾರಿಗಳ ಕಚೇರಿಗೆ ಹಾಗೂ ಎಚ್. ಹೊನ್ನಮ್ಮ ಅವರನ್ನು ವಿಜಯನಗರ ಜಿಲ್ಲಾಧಿಕಾರಿ ಕಚೇರಿಗೆ ನಿಯುಕ್ತಿಗೊಳಿಸಲಾಗಿದೆ.
ಆದೇಶದಂತೆ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗೊಂಡಿರುವ ಎಲ್ಲ ಅಧಿಕಾರಿಗಳು ವಿಳಂಬ ಮಾಡದೆ ಕೂಡಲೇ ಹೊಸ ಕರ್ತವ್ಯ ಸ್ಥಳದಲ್ಲಿ ಹಾಜರಾಗಿ, ಅಧಿಕಾರ ವಹಿಸಿಕೊಂಡ ವರದಿಯನ್ನು ಸರ್ಕಾರಕ್ಕೆ ಇ-ಮೇಲ್ ಮೂಲಕ ಕಳುಹಿಸಬೇಕು ಎಂದು ಸೂಚಿಸಲಾಗಿದೆ. ಇನ್ನೂ ಸ್ಥಳನಿಯುಕ್ತಿಗೆ ಬಾಕಿ ಇರುವ ಅಧಿಕಾರಿಗಳು ಮುಂದಿನ ಆದೇಶದವರೆಗೆ ಕಂದಾಯ ಇಲಾಖೆಯ ಸೇವೆಗಳು-3 ಶಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿದೆ.