ಹೊಸದಿಲ್ಲಿ, ನ. 19: ಭಾರತೀಯ ಸಂಸ್ಕೃತಿ ‘ತಿನ್ನು, ಕುಡಿ, ಮೋಜು ಮಾಡು’ ಎಂಬ ಮನೋಭಾವವನ್ನು ಪ್ರೋತ್ಸಾಹಿಸುವುದಿಲ್ಲ. ಜನರಲ್ಲಿ ಉಳಿತಾಯದ ಅಭ್ಯಾಸ ಬೆಳೆಸುವ ಮೂಲಕ ಆರ್ಥಿಕ ಭದ್ರತೆಗೆ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಸರಕಾರದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 50 ಕೋಟಿ ಜನರನ್ನು ಬಡತನದಿಂದ ಹೊರತರುವಲ್ಲಿ ಯಶಸ್ಸು ಸಾಧಿಸಲಾಗಿದೆ. ಆದರೆ, ಬಡತನದಿಂದ ಹೊರಬಂದವರು ದುಂದುವೆಚ್ಚ ಮತ್ತು ಅಶಿಸ್ತಿನ ಖರ್ಚಿನಿಂದ ಮತ್ತೆ ಬಡತನಕ್ಕೆ ಜಾರುವ ಅಪಾಯವಿದೆ. ಹೀಗಾಗಿ ಜನರಲ್ಲಿ ಉಳಿತಾಯದ ಸಂಸ್ಕೃತಿ ಬೆಳೆಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಎಲ್ಲ ಕೇಂದ್ರ ಸಚಿವರು ಹಾಗೂ ಸರಕಾರದ ಕಾರ್ಯದರ್ಶಿಗಳು ಜನರಲ್ಲಿ ಉಳಿತಾಯದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಆರ್ಥಿಕ ಶಿಸ್ತು ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಹಣ ಉಳಿಸುವ ಅಭ್ಯಾಸವನ್ನು ಪ್ರೋತ್ಸಾಹಿಸಬೇಕು ಎಂದು ಸೂಚಿಸಿದರು.
2011ರಿಂದ 2023ರ ಅವಧಿಯಲ್ಲಿ ಭಾರತ ಬಡತನ ನಿರ್ಮೂಲನೆ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ರಾಷ್ಟ್ರೀಯ ಸಂಭ್ರಮಾಚರಣೆಗೆ ಅರ್ಹವಾಗಿದೆ. ಈ ಯಶಸ್ಸು ಕೇವಲ ಸರಕಾರದ ಪ್ರಯತ್ನದಿಂದ ಸಾಧ್ಯವಾಗಿಲ್ಲ. ಅಧಿಕಾರಿಗಳು, ಕೈಗಾರಿಕೆಗಳು ಹಾಗೂ ನಾಗರಿಕರ ಸಾಮೂಹಿಕ ಸಹಕಾರವೂ ಇದಕ್ಕೆ ಕಾರಣವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ವಿಶ್ವಬ್ಯಾಂಕ್‌ನ ಅಕ್ಟೋಬರ್ ತಿಂಗಳ ಬಡತನ ಮತ್ತು ಸಮಾನತೆಯ ವರದಿಯ ಪ್ರಕಾರ, 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿದ್ದಾರೆ. ತೀವ್ರ ಬಡತನದಲ್ಲಿ ಬದುಕುತ್ತಿರುವವರ ಪ್ರಮಾಣವು 2011ರಲ್ಲಿ ಶೇ.27.1ರಷ್ಟಿದ್ದರೆ, 2023ರಲ್ಲಿ ಶೇ.2.6ಕ್ಕೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಎಡಪಂಥೀಯ ಉಗ್ರವಾದವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಯನ್ನೂ ಪ್ರಸ್ತಾಪಿಸಿದ ಮೋದಿ, ಸಾಮೂಹಿಕ ಪ್ರಯತ್ನದಿಂದ ದೊಡ್ಡ ಸವಾಲುಗಳನ್ನು ಎದುರಿಸಲು ಸಾಧ್ಯ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದರು.
ಮಾದಕ ವಸ್ತುಗಳ ದುರ್ಬಳಕೆಯನ್ನು ಸಂಪೂರ್ಣವಾಗಿ ತಡೆಯುವ ಅಗತ್ಯವನ್ನೂ ಒತ್ತಿಹೇಳಿದ ಅವರು, ಮುಂದಿನ ಪೀಳಿಗೆಯನ್ನು ಮಾದಕ ವಸ್ತುಗಳ ಹಾವಳಿಯಿಂದ ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಎಲ್ಲರೂ ದೃಢಸಂಕಲ್ಪ ಮಾಡಿದರೆ ಮಾದಕ ವಸ್ತುಗಳ ಪಿಡುಗನ್ನೂ ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು.