ಹೊಸದಿಲ್ಲಿ, ನ. 18: ದೇವಸ್ಥಾನಗಳು ಸೇರಿದಂತೆ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ನೀಡುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ ಬುಧವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ ನಾಥ್, ಆರ್. ಮಹಾದೇವನ್ ಹಾಗೂ ಅಪರೇಶ ಕುಮಾರ ಸಿಂಗ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿದಾರರ ವಾದ ಆಲಿಸಿದ ಬಳಿಕ ಅರ್ಜಿ ವಜಾಗೊಳಿಸಿದೆ. ಈ ಕುರಿತ ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ವಕೀಲೆ ಶ್ರುತಿ ಬಿಷ್ತ್ ಸಲ್ಲಿಸಿದ್ದ ಅರ್ಜಿಯಲ್ಲಿ, ಧಾರ್ಮಿಕ ಆಚರಣೆಗಳ ಭಾಗವಾಗಿ ಪ್ರಾಣಿಗಳನ್ನು ಬಲಿ ನೀಡಲು ವಿನಾಯಿತಿ ಕಲ್ಪಿಸಿರುವ 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 28ಕ್ಕೆ ತಿದ್ದುಪಡಿ ತರಲು ನಿರ್ದೇಶನ ನೀಡುವಂತೆ ಕೋರಲಾಗಿತ್ತು.
ದೇಶದ ಹಲವು ಭಾಗಗಳಲ್ಲಿ ಪ್ರಾಣಿ ಬಲಿ ಪದ್ಧತಿ ಇಂದಿಗೂ ಮುಂದುವರಿದಿದೆ. ಹಿಮಾಲಯ ಪ್ರದೇಶ, ಈಶಾನ್ಯ ರಾಜ್ಯಗಳು, ಒಡಿಶಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದ ವಿವಿಧೆಡೆ ಈ ಆಚರಣೆ ಚಾಲ್ತಿಯಲ್ಲಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಪ್ರಾಣಿಗಳಿಗೂ ಬದುಕುವ ಹಕ್ಕಿದ್ದು, ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಅವುಗಳನ್ನು ಬಲಿ ನೀಡುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು. ಪ್ರಾಣಿ ಬಲಿ ತಡೆಗೆ ಕಠಿಣ ಕಾನೂನು ಜತೆಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು.
ಮಾರ್ಚ್ನಲ್ಲಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕೇಂದ್ರ ಪಶುಸಂಗೋಪನಾ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿ ಪ್ರತಿಕ್ರಿಯೆ ಕೇಳಿತ್ತು. ಇದೀಗ ಅರ್ಜಿಯನ್ನು ವಜಾಗೊಳಿಸಲಾಗಿದ್ದು, ನ್ಯಾಯಾಲಯದ ನಿರ್ಧಾರಕ್ಕೆ ಕಾರಣಗಳು ವಿಸ್ತೃತ ಆದೇಶದಲ್ಲಿ ಸ್ಪಷ್ಟವಾಗಲಿವೆ.