ಬೆಂಗಳೂರು, ಜುಲೈ 29: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮೊದಲ ಕರಡು ಮತದಾರರ ಪಟ್ಟಿಯಿಂದ 84,31,612 ಮತದಾರರನ್ನು ಹೊರಗಿಡಲು ಗುರುತಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ ಸ್ಥಳ ಮಹಜರು ನಡೆಸಲಾಗಿದ್ದು, ಮೃತಪಟ್ಟವರ ಮರಣ ಪ್ರಮಾಣಪತ್ರ ಸಂಗ್ರಹಿಸುವುದರ ಜೊತೆಗೆ ಸಂಬಂಧಪಟ್ಟವರಿಂದ ಸಹಿ ಪಡೆಯಲಾಗಿದೆ. ಈ ಪರಿಶೀಲನೆಯ ಆಧಾರದ ಮೇಲೆ 84 ಲಕ್ಷಕ್ಕೂ ಹೆಚ್ಚು ಮತದಾರರನ್ನು ಮೊದಲ ಕರಡು ಪಟ್ಟಿಯಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕರಡು ಪಟ್ಟಿಯಿಂದ ಹೊರಗಿಡಲಾಗುತ್ತಿರುವವರಲ್ಲಿ 51,74,968 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವವರು. 14,99,799 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, 11,61,231 ಮಂದಿಯ ಸುಳಿವು ಪತ್ತೆಯಾಗಿಲ್ಲ. ಅಲ್ಲದೆ, 5,62,572 ನಕಲಿ ಅಥವಾ ಒಂದಕ್ಕಿಂತ ಹೆಚ್ಚು ಕಡೆ ಮತದಾರರಾಗಿ ನೋಂದಾಯಿಸಿಕೊಂಡಿರುವವರು ಹಾಗೂ ಸಹಿ ಮಾಡಲು ನಿರಾಕರಿಸಿದ 33,042 ಮಂದಿಯ ಹೆಸರನ್ನೂ ಕರಡು ಪಟ್ಟಿಯಿಂದ ಕೈಬಿಡಲು ಗುರುತಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 1.3 ಕೋಟಿ ಮತದಾರರಿದ್ದು, ಇದುವರೆಗೆ 47.97 ಲಕ್ಷ ಮಂದಿ ಮಾತ್ರ ಎನ್ಯೂಮರೇಷನ್ ಅರ್ಜಿಗಳನ್ನು ವಾಪಸ್ ಸಲ್ಲಿಸಿದ್ದಾರೆ. ಸುಮಾರು 39.38 ಲಕ್ಷ, ಅಂದರೆ ಶೇಕಡಾ 40ರಷ್ಟು ಮತದಾರರ ಸುಳಿವು ಲಭ್ಯವಾಗಿಲ್ಲ. ಇನ್ನೂ 16.57 ಲಕ್ಷ ಮತದಾರರು ಅರ್ಜಿಗಳನ್ನು ಸಲ್ಲಿಸಬೇಕಿದೆ ಎಂದು ಅನ್ಬುಕುಮಾರ್ ತಿಳಿಸಿದರು.
ರಾಜ್ಯಾದ್ಯಂತ ಒಟ್ಟು 5,54,32,314 ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ 4,26,75,861 ಅರ್ಜಿಗಳು ವಾಪಸ್ ಬಂದಿವೆ ಹಾಗೂ ಡಿಜಿಟೈಸೇಷನ್ ಪೂರ್ಣಗೊಂಡಿದೆ. ಇದುವರೆಗೆ ಎಸ್‌ಐಆರ್ ಕಾರ್ಯ ಶೇಕಡಾ 76.99ರಷ್ಟು ಪೂರ್ಣಗೊಂಡಿದ್ದು, ಇನ್ನೂ 43,24,841 ಮತದಾರರ ಮಾಹಿತಿ ಲಭ್ಯವಾಗಬೇಕಿದೆ. ಆಗಸ್ಟ್ 8ರ ನಂತರ ಈ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಅವರು ಹೇಳಿದರು.
ಇದುವರೆಗೆ 3.22 ಲಕ್ಷ ಆನ್‌ಲೈನ್ ಅರ್ಜಿಗಳು, 2,283 ಫಾರ್ಮ್–6ಎ ಅರ್ಜಿಗಳು ಹಾಗೂ 7.73 ಲಕ್ಷ ಫಾರ್ಮ್–7 ಅರ್ಜಿಗಳು ಸ್ವೀಕೃತಗೊಂಡಿವೆ. ಸುಮಾರು 29 ಲಕ್ಷ ಮಂದಿ '2002ರ ಮಾಹಿತಿ ಲಭ್ಯವಿಲ್ಲ' ಎಂದು ತಿಳಿಸಿ ಅರ್ಜಿ ಸಲ್ಲಿಸಿದ್ದಾರೆ. ಆದರೂ ಮಾಹಿತಿ ಇಲ್ಲದಿದ್ದರೂ ಬಿಎಲ್‌ಒಗಳ ನೆರವಿನಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಅರ್ಜಿ ಸಲ್ಲಿಸದ ಮತದಾರರು ಆಗಸ್ಟ್ 8ರೊಳಗೆ ಬಿಎಲ್‌ಒಗಳ ಸಹಾಯದಿಂದ ಅರ್ಜಿ ಸಲ್ಲಿಸಬೇಕು. ಶಾಶ್ವತವಾಗಿ ಸ್ಥಳಾಂತರಗೊಂಡಿರುವ 51.74 ಲಕ್ಷ ಮಂದಿ ಪ್ರಸ್ತುತ ಕರ್ನಾಟಕದ ಯಾವುದೇ ಕ್ಷೇತ್ರದಲ್ಲಿ ವಾಸವಾಗಿದ್ದು, ದೇಶದ ಬೇರೆಡೆ ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ, ಫಾರ್ಮ್–6 ಮೂಲಕ ವಿಳಾಸದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಉಳಿಸಲಾಗುವುದು. ಇಲ್ಲವಾದರೆ ಅಂತಿಮ ಮತದಾರರ ಪಟ್ಟಿಯಿಂದಲೂ ಅವರ ಹೆಸರನ್ನು ಕೈಬಿಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.
