ಹೊಸದಿಲ್ಲಿ, ಜುಲೈ 18: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿರುವ ನಡುವೆ, ಬಹರೈನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಹಾಗೂ ಇಂಧನ ಟ್ಯಾಂಕ್‌ಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಸೇನೆ ಹೇಳಿಕೊಂಡಿದೆ.
ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಪ್ರಕಾರ, ಬಹರೈನ್‌ನಲ್ಲಿನ ಅಮೆರಿಕದ ಮಿಲಿಟರಿ ಸ್ವತ್ತುಗಳು ಹಾಗೂ ಇಂಧನ ಸಂಗ್ರಹ ಟ್ಯಾಂಕ್‌ಗಳಿಗೆ ಈ ದಾಳಿಯಿಂದ ಹಾನಿಯಾಗಿದೆ ಎಂದು ಇರಾನ್ ಹೇಳಿದೆ. ಬಹರೈನ್‌ನ ಶೇಖ್ ಈಸಾ ವಾಯುನೆಲೆಯ ವಿಮಾನ ನಿಲುಗಡೆ ಪ್ರದೇಶ ಮತ್ತು ಇಂಧನ ಟ್ಯಾಂಕ್‌ಗಳನ್ನು ಗುರಿಯಾಗಿಸಿಕೊಂಡೇ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ.
ಜಾಗತಿಕ ದುರಹಂಕಾರದ ಅಪರಾಧಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿರುವ ಇರಾನ್, ಅಮೆರಿಕವು ಶೇಖ್ ಈಸಾ ವಾಯುನೆಲೆಯನ್ನು ಪ್ರಾದೇಶಿಕ ಮಿಲಿಟರಿ ಕಾರ್ಯಾಚರಣೆಗಳಿಗೆ, ವಿಶೇಷವಾಗಿ ನಮ್ಮ ದೇಶದ ವಿರುದ್ಧದ ದಾಳಿಗಳಿಗೆ ಬಳಸಿಕೊಂಡಿದೆ ಎಂದು ಆರೋಪಿಸಿದೆ.
ಇರಾನ್ ಸೇನೆಯ ಹೇಳಿಕೆಯ ಪ್ರಕಾರ, ಅಮೆರಿಕದ ಮಿಲಿಟರಿ ಸಾಮರ್ಥ್ಯಕ್ಕೆ ಹೊಡೆತ ನೀಡುವ ಉದ್ದೇಶದಿಂದ ಈ ಕ್ಷಿಪಣಿ ದಾಳಿ ನಡೆಸಲಾಗಿದೆ. ಆದರೆ ದಾಳಿಯಿಂದ ಸಂಭವಿಸಿದ ಹಾನಿಯ ಕುರಿತು ಅಮೆರಿಕದ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ. ಜೊತೆಗೆ, ಇರಾನ್ ಮಾಡಿರುವ ಈ ದಾಳಿಯ ಹೇಳಿಕೆಯನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ.