LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ವಂದೇ ಮಾತರಂ ಗೊಂದಲ; ಪಾಲಿಕೆ ಸಭೆಯಲ್ಲಿ ಗದ್ದಲ

ಬೆಳಗಾವಿ, ಸೆ. 30 : (ಸಮದರ್ಶಿ ಸುದ್ದಿ) - ಬೆಳಗಾವಿ ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಬುಧವಾರ ‘ವಂದೇ ಮಾತರಂ’ ಗೀತೆ ಪ್ರಸಾರದ ವೇಳೆ ಉಂಟಾದ ಗೊಂದಲ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಗೀತೆಯ ಎಷ್ಟು ಚರಣಗಳನ್ನು ಹಾಡಬೇಕು ಹಾಗೂ ಧ್ವನಿಮುದ್ರಣವನ್ನು ಹೇಗೆ ಪ್ರಸಾರ ಮಾಡಬೇಕು ಎಂಬ ವಿಚಾರದಲ್ಲಿ ಗೊಂದಲ ಉಂಟಾಗಿ, ಗೀತೆಗೆ ಅಗೌರವ ತೋರಲಾಗಿದೆ ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು.

ಸಭೆ ಆರಂಭವಾಗುತ್ತಿದ್ದಂತೆ ಧ್ವನಿಮುದ್ರಿತ ನಾಡಗೀತೆ ಮೊಳಗಿದ್ದು, ಮೇಯರ್, ಉಪಮೇಯರ್, ಸದಸ್ಯರು ಹಾಗೂ ಅಧಿಕಾರಿಗಳು ಎದ್ದುನಿಂತು ಗೌರವ ಸೂಚಿಸಿದರು. ಬಳಿಕ ‘ವಂದೇ ಮಾತರಂ’ ಗೀತೆ ಪ್ರಸಾರವಾಯಿತು.

ರಾಜ್ಯ ಸರ್ಕಾರದ ಆದೇಶದಂತೆ ಎರಡು ಚರಣಗಳ ಧ್ವನಿಮುದ್ರಣ ಪ್ರಸಾರವಾಗುತ್ತಿದ್ದಾಗ ಎಲ್ಲ ಸದಸ್ಯರೂ ಎದ್ದುನಿಂತಿದ್ದರು. ಎರಡು ಚರಣಗಳು ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಕುಳಿತುಕೊಳ್ಳಲು ಮುಂದಾದರು. ಇದೇ ವೇಳೆ ಬಿಜೆಪಿ ಸದಸ್ಯರು ಮುಂದಿನ ಚರಣಗಳನ್ನು ಸಾಮೂಹಿಕವಾಗಿ ಹಾಡಲು ಆರಂಭಿಸಿ, ಗೀತೆಯ ಎಲ್ಲ ಆರು ಚರಣಗಳನ್ನು ಹಾಡಿದರು. ಇದರಿಂದ ಕಾಂಗ್ರೆಸ್ ಸದಸ್ಯರೂ ಕೊನೆಯವರೆಗೆ ಎದ್ದುನಿಂತರು.

ಆದರೆ, ಬಿಜೆಪಿ ಸದಸ್ಯರು ಗಾಯನ ಮುಗಿಸಿದ ಬಳಿಕವೂ ಧ್ವನಿಮುದ್ರಣದಲ್ಲಿ ‘ವಂದೇ ಮಾತರಂ’ ಮೊಳಗುತ್ತಲೇ ಇತ್ತು. ಇದನ್ನು ಗಮನಿಸದ ಬಿಜೆಪಿಯ ಕೆಲವು ಸದಸ್ಯರು ಕುಳಿತುಕೊಳ್ಳಲು ಮುಂದಾದರು. ಧ್ವನಿಮುದ್ರಣ ಇನ್ನೂ ಮುಂದುವರಿದಿರುವುದನ್ನು ಗಮನಿಸಿದ ಕೂಡಲೇ ಮತ್ತೆ ಎದ್ದುನಿಂತರು. ಗೀತೆ ಮುಗಿದ ಬಳಿಕ ‘ಭಾರತ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿ ಕುಳಿತರು.

ಈ ಬೆಳವಣಿಗೆಗೆ ಆಕ್ಷೇಪ ವ್ಯಕ್ತಪಡಿಸಿದ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ಗೀತೆಗೆ ಅಗೌರವವಾಗಿದೆ ಎಂದು ಆರೋಪಿಸಿದರು.

“ನಾವು ವಂದೇ ಮಾತರಂ ವಿರೋಧಿಗಳಲ್ಲ. ನಾವೂ ದೇಶಭಕ್ತರೇ. ಆದರೆ ಎಷ್ಟು ಚರಣಗಳನ್ನು ಹಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕಿತ್ತು. ಕೆಲವರು ಎರಡು ಚರಣ ಹಾಡಿದರೆ, ಇನ್ನು ಕೆಲವರು ಆರು ಚರಣ ಹಾಡಿದ್ದಾರೆ. ಗೀತೆಯನ್ನು ಪೂರ್ಣವಾಗಿ ಹಾಡಿದ ಸದಸ್ಯರು ಕುಳಿತಾಗಲೂ ಧ್ವನಿಮುದ್ರಣದಲ್ಲಿ ಗೀತೆ ಮುಂದುವರಿದಿತ್ತು. ಇಂತಹ ಗೊಂದಲಕ್ಕೆ ಅವಕಾಶ ಕೊಡಬಾರದಿತ್ತು” ಎಂದು ಅವರು ಮೇಯರ್ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಬಿಜೆಪಿ ಸದಸ್ಯ ಸಂದೀಪ ಜೀರಗ್ಯಾಳ ಆಕ್ಷೇಪ ವ್ಯಕ್ತಪಡಿಸಿ, “ವಂದೇ ಮಾತರಂ ಪೂರ್ಣವಾಗಿ ಹಾಡಿದರೆ ನಿಮಗೇನು ಸಮಸ್ಯೆ?” ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸೊಂಟಕ್ಕಿ, “ಪೂರ್ಣ ಗೀತೆ ಹಾಡಿದ್ದಕ್ಕೆ ನಮ್ಮ ತಕರಾರಿಲ್ಲ. ಧ್ವನಿಮುದ್ರಣದಲ್ಲಿ ಗೀತೆ ಮುಗಿಯುವ ಮುನ್ನವೇ ಕುಳಿತುಕೊಳ್ಳಲು ಮುಂದಾಗಿದ್ದಕ್ಕೆ ನಮ್ಮ ಆಕ್ಷೇಪ” ಎಂದು ತಿರುಗೇಟು ನೀಡಿದರು.

ನಾಮನಿರ್ದೇಶಿತ ಸದಸ್ಯರಾದ ಡಾ. ದಿನೇಶ ನಾಶಿಪುಡಿ, ಸಿದ್ರಾಯ ಮೇತ್ರಿ ಹಾಗೂ ಮೊಹಮ್ಮದ್ ಸಲೀಂ ಕೆ. ಸನದಿ ಕೂಡ ಸೊಂಟಕ್ಕಿ ಅವರ ವಾದಕ್ಕೆ ಧ್ವನಿಗೂಡಿಸಿದರು. ಮತ್ತೊಂದೆಡೆ ಬಿಜೆಪಿ ಸದಸ್ಯರೂ ಸಂದೀಪ ಜೀರಗ್ಯಾಳ ಪರವಾಗಿ ಮಾತನಾಡಿದ್ದರಿಂದ ಸಭಾಂಗಣದಲ್ಲಿ ಕೆಲಕಾಲ ಗದ್ದಲ ಉಂಟಾಯಿತು.

ಗೊಂದಲಕ್ಕೆ ತೆರೆ ಎಳೆಯಲು ಮುಂದಾದ ಮೇಯರ್ ಪ್ರೀತಿ ಕಾಮಕರ, ವಂದೇ ಮಾತರಂ ಧ್ವನಿಮುದ್ರಣವನ್ನು ನಿಖರವಾಗಿ ಪ್ರಸಾರ ಮಾಡುವಂತೆ ಹಲವು ಬಾರಿ ಸೂಚಿಸಿದ್ದರೂ ಅದನ್ನು ಪಾಲಿಸದಿರುವುದಕ್ಕೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಉಪಮೇಯರ್ ಹಣಮಂತ ಕೊಂಗಾಲಿ ಮಾತನಾಡಿ, “ಧ್ವನಿಮುದ್ರಣವನ್ನು ಅರ್ಧಕ್ಕೆ ನಿಲ್ಲಿಸಲಾಗುತ್ತದೆ ಎಂದು ಭಾವಿಸಿ ಬಿಜೆಪಿ ಸದಸ್ಯರು ಪೂರ್ಣ ಗೀತೆ ಹಾಡಿದರು. ಆದರೆ ಧ್ವನಿಮುದ್ರಣವೂ ಮುಂದುವರಿದ ಕಾರಣ ಈ ಗೊಂದಲ ಉಂಟಾಯಿತು” ಎಂದರು.

ವಿರೋಧ ಗುಂಪಿನ ಸದಸ್ಯ ಮತೀನ, “ರಾಜ್ಯ ಸರ್ಕಾರದ ಆದೇಶದಂತೆ ನಿಗದಿಪಡಿಸಿದಷ್ಟೇ ಗೀತೆಯನ್ನು ಪ್ರಸಾರ ಮಾಡಬೇಕಿತ್ತು. ಪಾಲಿಕೆ ಸರ್ಕಾರದ ಆದೇಶ ಪಾಲಿಸಬೇಕಾಗಿತ್ತು” ಎಂದು ವಾದಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಸಿಬ್ಬಂದಿ, ಸರ್ಕಾರದ ಆದೇಶದಂತೆ ಎರಡು ಚರಣಗಳನ್ನಷ್ಟೇ ಪ್ರಸಾರ ಮಾಡಲಾಗಿತ್ತು. ಆದರೆ ಧ್ವನಿಮುದ್ರಣ ‘ರಿಪೀಟ್’ ಆಗಿದ್ದರಿಂದ ಸುಮಾರು ಮೂರು ನಿಮಿಷಗಳ ಕಾಲ ಮತ್ತೆ ಮೊಳಗಿತು ಎಂದು ತಿಳಿಸಿದರು.

ಧ್ವನಿಮುದ್ರಣ ನಿರ್ವಹಣೆಯಲ್ಲಿ ಲೋಪ ಎಸಗಿದ ಸಿಬ್ಬಂದಿ ಮುಂದಿನ ಪರಿಷತ್ ಸಭೆಯಲ್ಲಿ ಕರ್ತವ್ಯ ನಿರ್ವಹಿಸಬಾರದು ಹಾಗೂ ಅವರನ್ನು ಅಲ್ಲಿಂದ ವರ್ಗಾಯಿಸಬೇಕು ಎಂದು ಮೇಯರ್ ಪ್ರೀತಿ ಕಾಮಕರ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಸಭೆಯ ಕಲಾಪ ಮುಂದುವರಿಯಿತು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST