‘ಆಕಾಶದೆತ್ತರ ಇರಲಿ ಆಕಾಂಕ್ಷೆಗಳು’ ಎಂದರು ನೆಹರು. ಅವರು ಅಂದು ಯೋಜಿಸಿದ್ದು, ಯೋಚಿಸಿದ್ದು ಎಲ್ಲ ಬೃಹತ್. ಹೊಟ್ಟೆ, ಬಟ್ಟೆಗೆ ಪರದಾಡುತ್ತಿದ್ದ ದೇಶದಲ್ಲಿ ಕನಸುಗಳನ್ನು ಬಿತ್ತಿ ಬೆಳೆಯುವುದು ಸುಲಭವಲ್ಲ. ಅದರಲ್ಲೂ ಅಂತರಿಕ್ಷ ಸಂಶೋಧನೆ, ಅಣುವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಜಗತ್ತು ಆಗ ತಾನೇ ಕಣ್ಣು ಬಿಡುತ್ತಿತ್ತು. ಅಂತರಿಕ್ಷ ಕ್ಷೇತ್ರ ಕನಸುಗಳ ಬೀಜ ನೆಡಲು ನೆಹರೂ ಜೊತೆ ಆದವರು ವಿಕ್ರಮ ಸಾರಾಭಾಯ್ ಮತ್ತು ಅಣು ವಿಜ್ಞಾನದ ಸಂಶೋಧನೆಗೆ ಹೆಗಲೊಡ್ಡಲು ನಿಂತವರು ಹೋಮಿ ಬಾಬಾ. ಎರಡೂ ಕ್ಷೇತ್ರಗಳಲ್ಲಿ ಈವತ್ತು ಭಾರತದ ಸಾಧನೆ ಇಷ್ಟು ಮುಂದೆ ಇದ್ದದ್ದಕ್ಕೆ ಕಾರಣ ಈ ಮೂವರು. ಇವೆಲ್ಲ ತಿರುಕನ ಕನಸು ಎಂದು ಗೇಲಿ ಮಾಡಿದವರೂ ಅಂದು ಇದ್ದರು, ಇಂದೂ ಇದ್ದಾರೆ.
ನಮ್ಮ ಬಡ ಪರ್ವತಾರೋಹಿಗಳ ಕೂಲಿಕಾರ ತೇನಸಿಂಗ್ ನೋರ್ಗೆಗೆ ಎವರೆಸ್ಟ್ ಶಿಖರ ಏರಲು ಬಡತನ ಅಡ್ಡಿ ಆಗಲೇ ಇಲ್ಲ. ಅವರಮ್ಮ ನಿತ್ಯ ಅದನ್ನು ಏರುವಂತೆ ಪ್ರೇರಿಸುತ್ತಿದ್ದರು. ಒಂದು ದಿನ ಆತ ಏರಿಯೇ ಬಿಟ್ಟ. ಸಾಧನೆಗೆ ಕಾರಣ ಏನು ಎಂದು ಕೇಳಿದಾಗ ಹೇಳಿದ, ಅದು ಅಲ್ಲಿ ಇದೆ, ಅದಕ್ಕಾಗಿ ಹತ್ತಿದೆ, ಇಲ್ಲದೇ ಇದ್ದರೆ ನಾನೆಲ್ಲಿ ಹತ್ತುತ್ತಿದ್ದೆ. ನಮ್ಮ ಇಸ್ರೋದ ವಿಚಾರವು ಹಾಗೆ. ಆಗ ಬಡ ರಾಷ್ಟ್ರ ಆಗಿದ್ದರೂ ಮುಗಿಲು ಮುಟ್ಟುವ ಮಹತ್ವಾಕಾಂಕ್ಷೆ ಇಸ್ರೋದ್ದು. ತಂಡ ಕಟ್ಟಿದ ವಿಕ್ರಮ ಸಾರಾಭಾಯ್ ಹುಡುಕಿ ಹುಡುಕಿ ಆಣಿ ಮುತ್ತುಗಳನ್ನು ಆರಿಸಿದ್ದರು. ಮೊದಲ ರಾಕೆಟ್ ಕೇರಳದ ತುಂಬಾದಿಂದ ಹಾರಿ ಬಿಡಬೇಕಾದರೆ, ರಾಕೆಟ್ ಬಿಡಿ ಭಾಗಗಳನ್ನು ಎತ್ತಿನ ಗಾಡಿ ಮತ್ತು ಸೈಕಲ್‍ಗಳಲ್ಲಿ ಸಾಗಿಸಿ ತರಲಾಗಿತ್ತು!.
ಮುಂದೆ ಶ್ರೀಹರಿ ಕೋಟಾಕ್ಕೆ ಉಡಾವಣಾ ಕೇಂದ್ರ ಮತ್ತು ಬೆಂಗಳೂರಿಗೆ ಇಸ್ರೋದ ಕೇಂದ್ರ ಕಚೇರಿ ಸ್ಥಳಾಂತರ ಆದಾಗ ಸಂಸ್ಥೆ ದಾಪುಗಾಲಿಟ್ಟು ನಡೆಯಿತು. ಉಪಗ್ರಹಗಳ ಉಡಾವಣೆ ನಿರಂತರ ಸಾಗಿತು. ಅಷ್ಟರಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಿತು ಎಂದು ಇಲ್ಲಿನ ಬಾಹ್ಯಾಕಾಶ ಸಂಸ್ಥೆ ಮೇಲೆ ನಿಷೇದ ಹೇರಲಾಯಿತು. ಮುಖ್ಯ ಉಡಾವಣೆಗೆ ಬೇಕಾದ ಕ್ರಯೋಜಿನಿಕ್ ಎಂಜಿನ್ ಪೂರೈಕೆ ನಿಂತಿತು, ಅದರ ತಂತ್ರಜ್ಞಾನ ಹಂಚಿಕೊಳ್ಳಲೂ ಪಶ್ಚಿಮದ ದೇಶಗಳು ನಿರಾಕರಿಸಿದವು. ಆಗ ಹಲವು ವರ್ಷಗಳ ಸತತ ಶ್ರಮದಿಂದ ಕ್ರಯೋಜಿನಿಕ್ ಎಂಜಿನ್ ಖುದ್ದು ತಯಾರಿಸಿಕೊಂಡ ಇಸ್ರೋ, ತನ್ನ ಈಗಿನ ಇನ್ನೊಂದು ಮಹತ್ವಾಕಾಂಕ್ಷೆಯಂತೆ ಹತ್ತಿರದ ಮಂಗಳ ಗ್ರಹದ ಅರಿವು ಪಡೆಯಲೆಂದು ಉಪಗ್ರಹ ಕಳಿಸಿದೆ.
2008ರ ನವೆಂಬರ್ 14, ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ದಿನ. ಆ ದಿನ ಇಸ್ರೋ ಕಚೇರಿಯಲ್ಲಿ ಸಂಭ್ರಮ ಸಡಗರ ಮನೆ ಮಾಡಿತ್ತು. ಆ ದಿನ ಇಸ್ರೋ ಬಾಹ್ಯಾಕಾಶ ನೌಕೆ ಚಂದ್ರಯಾನ-1 ಮಿಷನ್ ಅನ್ನು ಎಂಟು ದಿನಗಳ ನಂತರ, ಅಂದರೆ 22 ನವೆಂಬರ್ 2008 ರಂದು ಚಂದ್ರನ ಮೇಲ್ಮೈಗೆ ಇಳಿಸಲು ಸಿದ್ಧತೆ ನಡೆದಿತ್ತು. ಭಾರತದ ಆ ಚಂದ್ರನ ಕಾರ್ಯಾಚರಣೆಗೆ ಚಂದ್ರಯಾನ-1 ಎಂದು ಹೆಸರಿಸಲಾಯಿತು. ಆ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಲ್ಲಿ ನೀರು ಇರುವುದನ್ನು ಕಂಡು ಹಿಡಿದಾಗ. ಚಂದ್ರನ ಮೇಲ್ಮೈ ಮೇಲೆ ಶೋಧ ನಡೆಸಿದ ಐದನೇ ದೇಶ ಭಾರತ ಎಂಬ ಹೆಗ್ಗಳಿಕೆಗೂ ಇದು ಕಾರಣವಾಗಿತ್ತು.
ನಂತರ 2019ರಲ್ಲಿ ಚಂದ್ರಯಾನ-2 ಮಿಷನ್ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗ ನಿಯಂತ್ರಣ ತಪ್ಪಿತ್ತು, ಈ ಬಾರಿ ಚಂದ್ರನ ಮೈಮೇಲೆ ಯಶಸ್ವಿಯಾಗಿ ಲ್ಯಾಂಡರ್‍ನ್ ಇಳಿಸಿದ್ದು ಸಾಹಸದ ಮತ್ತೊಂದು ಮೈಲುಗಲ್ಲು.
ಚಂದ್ರಯಾನ ಯಶಸ್ಸಿಗೆ ಶ್ರಮಿಸಿದ ವಿಜ್ಞಾನಿಗಳಿಗೆ ಒಂದು ಸಲಾಮ್ -ಎ.ಬಿ.ಧಾರವಾಡಕರ