ಮೈಸೂರು: ಹಾಸ್ಟೇಲಿನಲ್ಲಿರುವ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಮಠದ ಮೂವರು ಹಾಗೂ ಮೈಸೂರಿನ ಇಬ್ಬರ ವಿರುದ್ಧ ನಜರಾಬಾದ ಪೊಲೀಸ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
ವಿದ್ಯಾರ್ಥಿನಿಯರ ಮೇಲೆ ಕಳೆದ ಕೆಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಕೋರ್ಟ ಆದೇಶದಂತೆ ಎಫ್ಐಆರ್ ಪ್ರತಿಯನ್ನು ಚಿತ್ರದುರ್ಗದ ಜಿಲ್ಲಾ ಪೊಲೀಸ ವರಿಷ್ಠರಿಗೆ ಕಳುಹಿಸಲಾಗಿದೆ. ಮೈಸೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ನೀಡಿದ ದೂರಿನನ್ವಯ ಎಫ್ಐಆರ್ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಚಿತ್ರದುರ್ಗದಲ್ಲಿ ಮಠ ನಡೆಸುತ್ತಿರುವ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ರಶ್ಮಿ ಎರಡನೇ ಆರೋಪಿಯಾಗಿದ್ದಾರೆ.
ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಶರಣರು ಮೂರೂವರೆ ವರ್ಷಗಳಿಂದ ಹಾಗು ಮತ್ತೊಬ್ಬರನ್ನು ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ಮಾಡುತ್ತಿರುವುದಾಗಿ ದೂರಲಾಗಿದೆ. ಈ ಕೃತ್ಯಕ್ಕೆ ಉಳಿದ ಆರೋಪಿಗಳು ಸಹಕರಿಸಿದರು ಎಂದು ವಿದ್ಯಾರ್ಥಿನಿಯರು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತ ಸಮಾಲೋಚನೆ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ವಾಮೀಜಿ ಬಳಿಗೆ ಹೋಗಲು ಒಪ್ಪದಿದ್ದರೆ ಹಾಸ್ಟೆಲ್ ಸಿಬ್ಬಂದಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದ್ದು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಮುನ್ನ ಕುಟುಂಬಸ್ಥರಿಗೆ ಸಹಾಯ ಹಸ್ತ ನೀಡಲಾಗುತ್ತಿತ್ತು ಹಾಗೂ ನಂತರ ಲೈಂಗಿಕ ಉದ್ದೇಶಕ್ಕೆ ಬಳಸಿಕೊಂಡಿರುವುದಾಗಿ ಆರೋಪಿಸಲಾಗಿದೆ ತಿಳಿದು ಬಂದಿದೆ.
ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಹಣ್ಣು ಮತ್ತು ಸಿಹಿ ಪದಾರ್ಥಗಳಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಅತ್ಯಾಚಾರ ನಡೆಸುತ್ತಾರೆ ಎಂದು ದೂರಲಾಗಿದೆ. ಕಿರುಕುಳ ಪ್ರಶ್ನಿಸಿದ ಕಾರಣ ಹಾಸ್ಟೆಲ್ನಿಂದ ಹೊರ ಹಾಕಲಾಗುತ್ತಿತ್ತು ಎಂದು ನೊಂದ ವಿದ್ಯಾರ್ಥಿನಿಯರು ದೂರಿದ್ದಾರೆ.