ವಿಜಯವಾಡ: ವಿಧಿಯ ಆಟದಲ್ಲಿ ಮಗಳನ್ನು ಕಳೆದುಕೊಂಡ ತಂದೆಯೊಬ್ಬ ಬಳಿಕ ಆಕೆಯನ್ನು ಮರೆಯಲಾಗದೇ ಮಗಳ ಮೂರ್ತಿಯನ್ನು ಸ್ಥಾಪಿಸಿ, ದೇವಸ್ಥಾನ ನಿರ್ಮಿಸಿ ನಿತ್ಯವೂ ಪೂಜೆ ಮಾಡುತ್ತಿರುವ ಅಪರೂಪದ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ವೆಂಕಟಾಚಲಂ ಮಂಡಲದ ಕಾಕೂಟೂರಿನ ಚೆಂಚಯ್ಯ ಮತ್ತು ಲಕ್ಷ್ಮಮ್ಮ ದಂಪತಿಗೆ ಐವರು ಮಕ್ಕಳು. ಅದರಲ್ಲಿ ನಾಲ್ಕನೇ ಮಗಳ ಹೆಸರು ಸುಬ್ಬಲಕ್ಷ್ಮಮ್ಮ. ಈಕೆ ಹುಟ್ಟಿದ ಮೇಲೆ ಕುಟುಂಬ ಆರ್ಥಿಕವಾಗಿಯೂ ಸದೃಢವಾಯಿತು. ಹೀಗಾಗಿ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಮಗಳಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಾಗ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.
ಆದರೆ, ಆ ಸಂತೋಷ ಹೆಚ್ಚು ದಿನ ಇರಲಿಲ್ಲ. 2011ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುಬ್ಬಲಕ್ಷ್ಮಮ್ಮ ಪ್ರಾಣ ಕಳೆದುಕೊಂಡಿದ್ದಳು. ಆಕೆಯ ಸಾವಿನಿಂದಾಗಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು.
ಒಂದು ದಿನ ತಂದೆ ಚೆಂಚಯ್ಯಯ ಕನಸಿನಲ್ಲಿ ಮಗಳು ಸುಬ್ಬಲಕ್ಷ್ಮಮ್ಮ ಕಾಣಿಸಿಕೊಂಡಳಂತೆ. ಆಕೆಯ ಬಯಕೆಯಂತೆ ದೇವಸ್ಥಾನ ಕಟ್ಟಿದ್ದಾಗಿ ಚೆಂಚಯ್ಯ ಹೇಳಿದ್ದಾನೆ.
ಮಗಳ ಮೂರ್ತಿಯನ್ನು ಸ್ಥಾಪಿಸಿ, ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೇ ಪ್ರತಿ ವರ್ಷ ಮಗಳ ಹೆಸರಿನಲ್ಲಿ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದಾನೆ. ಮಗಳಿಗಾಗಿ ದೇವಸ್ಥಾನ ನಿರ್ಮಿಸಿದ ಚೆಂಚಯ್ಯನನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.