ಹುಬ್ಬಳ್ಳಿ : ಬಿಜೆಪಿಯವರು ಲಂಚದಿಂದ ಸಂಪಾದಿಸಿರುವ ಹಣದಿಂದ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರಿಗೆ ಜನರ ಬಗ್ಗೆ ಖಾಳಜಿ ಇಲ್ಲ. ತಮ್ಮದೇ ಪಕ್ಷದ ಸಚಿವ ಉಮೇಶ ಕತ್ತಿ ಅವರ ನಿಧನದ ಮೂರು ದಿನ ಶೋಕಾಚರಣೆಯ ಕೊನೆಯ ದಿನವೇ ಸರಕಾರದ ಸಂಭ್ರಮಾಚರಣೆ ಮಾಡಿದೆ. ಇದರಿಂದಲೇ ಗೊತ್ತಾಗುತ್ತೆ ಆ ಪಕ್ಷದ ನಿಜ ಬಣ್ಣ ಏನೆಂದು ಅಂತಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಬಂದು ಸಾಕಷ್ಟು ಸಮಸ್ಯೆ ಆಗಿದೆ. ಸುಮಾರು ಏಳು ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಮಳೆಯಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ. ಆದರೆ ಲಂಚ ಹೊಡೆದಿರುವ ದುಡ್ಡಿನಲ್ಲಿ ಬಿಜೆಪಿ ಕಾರ್ಯಕ್ರಮ ಮಾಡಿದೆ. ಸಂಕಷ್ಟದಲ್ಲಿರುವ ಜನರಿಗೆ ಸ್ಪಂದನೆ ಮಾಡುವುದನ್ನು ಬಿಟ್ಟು ಬಿಜೆಪಿಯವರು ಡ್ಯಾನ್ಸ ಮಾಡುತ್ತಿದ್ದಾರೆ ಎಂದರು.
ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಬಿಜೆಪಿಯ ಕೆಲ ಸಚಿವರು, ಶಾಸಕರು ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಡ್ಯಾನ್ಸ ಮಾಡಿರುವದನ್ನು ಗಮನಿಸಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ರಾತ್ರಿ ನಿಧನರಾದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ ಕ್ಷೇತ್ರದ ಶಾಸಕ ಕತ್ತಿಯವರ ಅಗಲಿಕೆಗೆ ಬುಧವಾರದಿಂದ ಮೂರು ದಿನಗಳವರೆಗೆ ರಾಜ್ಯ ಸರ್ಕಾರ ಶೋಕಾಚರಣೆ ಘೋಷಿಸಿತ್ತು.
ಉಮೇಶ ಕತ್ತಿ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ, ಆದರೆ ಅವರ ನಿಧನಕ್ಕೆ ಒಂದು ಕಡೆಗೆ ಶೋಕಾಚಾರಣೆ ಮಾಡುತ್ತೇವೆ ಅಂತಾರೆ, ಇನ್ನೊಂದೆಡೆ ರಸ್ತೆಯಲ್ಲಿ ಡ್ಯಾನ್ಸ ಮಾಡುತ್ತಿದ್ದಾರೆ. ಅವರಿಗೆ ಜನರ ಬಗ್ಗೆ ಖಾಳಜಿಗಿಂತ ಪರ್ಸಂಟೇಜ್ ಹೊಡೆಯೋದ್ರಲ್ಲಿ ಮಾತ್ರ ಖಾಳಜಿ ಇದೆ ಎಂದು ವ್ಯಂಗ್ಯವಾಡಿದರು.
ಪಿಎಸ್ ಐ ಹಗರಣದಲ್ಲಿ ಶಾಸಕ ಬಸವರಾಜ ದಡೇಸಗೂರು ಹಣ ಪಡೆದ ಬಗ್ಗೆ ತಾವೇ ಒಪ್ಪಿಕೊಂಡಿದ್ದಾರೆ. ಆತನ ವಿರುದ್ಧ ಎಫ್ ಐಆರ್ ದಾಖಲು ಮಾಡಿ ತನಿಖೆ ನಡೆಸಬೇಕು. ಪ್ರಿಯಾಂಕ ಖರ್ಗೆ ಮಾತನಾಡಿದ್ರೆ ನೋಟಿಸ್ ಕೊಡುತ್ತಾರೆ. ಅದೇ ಅವರ ಶಾಸಕ ಸ್ವತಃ ಒಪ್ಪಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿಯವರು ಪ್ರತಿಯೊಂದು ವಿಷಯದಲ್ಲಿ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದರು.
ದಾವಣಗೆರೆಯಲ್ಲಿ ಇತ್ತೀಚಿಗೆ ನಡೆದ ತಮ್ಮ ಜನ್ಮದಿನಾಚರಣೆ ಪ್ರತ್ಯುತ್ತರವಾಗಿ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದ್ದಾರೆ. ನನ್ನ ಜನ್ಮ ದಿನಾಚರಣೆಗೆ ಜನ ತಾವಾಗಿಯೇ ಬಂದಿದ್ದರು. ಆದರೆ ಜನಸ್ಪಂದನ ಕಾರ್ಯಕ್ರಮಕ್ಕೆ ದುಡ್ಡು ಕೊಟ್ಟು ಕರೆಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಎಸಿಬಿ ರದ್ದುಪಡಿಸಿ ಲೋಕಾಯುಕ್ತ ಮರು ರಚನೆ ಮಾಡಿರುವುದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ನ್ಯಾಯಾಲಯದಿಂದಲೇ ಆದೇಶವಿದೆ. ಹೀಗಾಗಿ ತಾವು ಸ್ವಾಗತಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.