ಬೆಳಗಾವಿ, ಅಕ್ಟೋಬರ ೨ (ಸಮದರ್ಶಿ ಸುದ್ದಿ)- 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ, ಬೆಳಗಾವಿಯ ಹಿಂಡಲಗಾ ಜೈಲಿನಲಿದ್ದ 21 ವರ್ಷದ ಬಿಎ ಪದವೀಧರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದ ಮಂಜುನಾಥ ಮಹಾಂತೇಶ ನಾಯ್ಕರ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಐದು ತಿಂಗಳ ಹಿಂದೆ ತನ್ನದೇ ಗ್ರಾಮದ ಸಂಬಂಧಿಯಾದ ಬಾಲಕಿಯನ್ನು ಒತ್ತಾಯ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. ತನ್ನ ಇಚ್ಛೆಗೆ ವಿರುದ್ಧವಾಗಿ ವರ್ತಿಸಿದ್ದರಿಂದ ಯುವತಿ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ವಿಚಾರಣಾಧೀನ ಕೈದಿಗಳ ಕೊಠಡಿಯಲ್ಲಿದ್ದ ಮಂಜುನಾಥನು ರವಿವಾರ ಮುಂಜಾನೆ ತನ್ನ ಹಾಸಿಗೆಯ ಬೆಡ್ ಶೀಟ್ ತೆಗೆದುಕೊಂಡು ಕ್ವಾರಂಟೈನ್ ಕೋಣೆಗೆ ತೆರಳಿ ಕಿಟಕಿಯ ಸರಳಿಗೆ ಬೆಡಶೀಟ್ ನಿಂದ ಒಂದು ತುದಿಯನ್ನೂ ಇನ್ನೊಂದು ಬದಿಯನ್ನು ತನ್ನ ಕುತ್ತಿಗೆಗೂ ಕಟ್ಟಿಕೊಂಡು ನೇತಾಡುತ್ತಿದ್ದ. ಇದನ್ನು ನೋಡಿದ ಇತರ ಕೈದಿಗಳು ಜೈಲು ಸಿಬ್ಬಂದಿಗೆ ತಿಳಿಸಿ ಜೈಲಿನ ಆಸ್ಪತ್ರೆಯಲ್ಲಿ ಸೇರಿಸಿದ ನಂತರ ಜಿಲ್ಲಾ ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಮಂಜುನಾಥ ಅಸುನೀಗಿದ.
ಜೈಲಿನ ಯಾವುದೇ ಕೊಠಡಿಗಳ ಚಾವಣಿಗಳಿಗೆ ಕೊಂಡಿಗಳಿರುವುದಿಲ್ಲ, ಕಿಟಕಿಗಳೂ ಕಡಿಮೆ ಎತ್ತರದಲ್ಲಿರುತ್ತವೆ. ಆದರೆ ಮಹಾಂತೇಶ ಕಿಟಕಿಯ ಮೇಲಿನ ಕಬ್ಬಿಣದ ಸರಳಿಗೆ ಬೆಡ್ ಶೀಟ ಕಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಜೈಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕಿತ್ತೂರಿನ ಕಾಲೇಜೊಂದರ ಕಲಾ ವಿಭಾಗದಲ್ಲಿ ಪದವೀಧರನಾಗಿದ್ದ ಮಂಜುನಾಥ ಮತ್ತು ಅದೇ ಊರಿನ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಬಾಲಕಿ ಸಂಬಂಧಿಕರು ಮತ್ತು ಆತ್ಮೀಯರಾಗಿದ್ದರು.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಜೈಲಿನ ಮುಖ್ಯಸ್ಥ ಕೃಷ್ಣಕುಮಾರ ಅವರು, ಮಂಜುನಾಥ ತಾನು ಮಾಡಿದ್ದ ಕೃತ್ಯದ ಕುರಿತು ಪಶ್ಚಾತಾಪ ಹೊಂದಿದ್ದ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆತ ಸಾಮಾನ್ಯರಂತೆ ವರ್ತಿಸುತ್ತಿರಲಿಲ್ಲ. ಅಲ್ಲದೇ ತನ್ನಿಂದ ತನ್ನ ಕುಟುಂಬ ತಲೆ ತಗ್ಗಿಸುವಂತಾಗಿದೆ. ಬದುಕುವದಕ್ಕಿಂತ ಸಾಯುವುದೇ ಲೇಸು ಎಂದು ಜೊತೆಗಿದ್ದ ಕೈದಿಗಳಿಗೆ ಹೇಳುತ್ತಿದ್ದ ಎಂದು ತಿಳಿಸಿದರು.
ಬಿಎ ಪದವೀಧರನಾಗಿದ್ದ ಮಂಜುನಾಥನು ತಮ್ಮ ಅಲ್ಪ ಪ್ರಮಾಣದ ಹೊಲದಲ್ಲಿ ದುಡಿಯುತ್ತಿದ್ದ. ಯುವತಿಯ ಕುಟುಂಬ ಕೂಡ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದೆ, ಆರ್ಥಿಕವಾಗಿ ಸಬಲವಾಗಿಲ್ಲ. ಮಂಜುನಾಥನನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಅವನ ಕುಟುಂಬ ಜಾಮೀನಿಗೆ ಅರ್ಜಿ ಸಲ್ಲಿಸಿತ್ತು, ಆದರೆ ಅದು ತಿರಸ್ಕಾರಗೊಂಡಿತ್ತು ಎಂದು ಕಿತ್ತೂರು ಪೊಲೀಸರು ಸಮದರ್ಶಿಗೆ ತಿಳಿಸಿದರು.