ಬೆಳಗಾವಿ, 2- ಮಹಾರಾಷ್ಟ್ರದಲ್ಲಿ ಪುನಃ ಆರಂಭಗೊಂಡಿರುವ “ಮರಾಠಾ ಮೀಸಲಾತಿ ಹೋರಾಟ” ಹಿಂಸಾತ್ಮಕ ಉಗ್ರರೂಪ ಪಡೆದುಕೊಂಡಿದ್ದು ಕರ್ನಾಟಕದ ಒಂದು ಬಸ್ ಸೇರಿದಂತೆ ಆರು ಬಸ್ ಅಗ್ನಿಗಾಹುತಿಯಾಗಿವೆ.
ಔರಂಗಾಬಾದದಿಂದ ಹುಬ್ಬಳ್ಳಿಗೆ ಹಿಂದಿರುಗುತ್ತಿದ್ದ ಹುಬ್ಬಳ್ಳಿ ವಿಭಾಗಕ್ಕೆ ಸೇರಿದ್ದ ಬಸ್ಸಿಗೆ ಜಾಲ್ನಾ ಜಿಲ್ಲೆಯ ಅಂಬಡ್ ತಾಲ್ಲೂಕಿನ ಉಡಿಗೋದ್ರಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿ ಹಚ್ಚಲಾಗಿದೆ. ಸುಮಾರು 300 ರಷ್ಟಿದ್ದ ಉದ್ರಿಕ್ತ ಗುಂಪು ಕರ್ನಾಟಕ ಬಸ್ ಗಿಂತ ಮುಂದೆ ಲಾತೂರಿಗೆ ಹೊರಟಿದ್ದ ಮಹಾರಾಷ್ಟ್ರ ಬಸ್ಸನ್ನು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಿತ್ತು. ನಂತರ ಕರ್ನಾಟಕ ಬಸ್ಸನ್ನೂ ತಡೆದು, ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಲಾಯಿತು. ಇದಕ್ಕಿಂತ ಮೊದಲು ಕಲ್ಲೆಸೆದು ಬಸ್ಸಿನ ಗಾಜುಗಳನ್ನು ಒಡೆಯಲಾಯಿತು.
ಸಮದರ್ಶಿಗೆ ಮಾಹಿತಿ ನೀಡಿದ ಬಸ್ಸಿನ ಡ್ರೈವರ್ ರಾಮದುರ್ಗದ ಎಲ್ ಎಲ್ ಲಮಾಣಿ ಅವರು, “ಗಲಾಟೆ ನಡೆದ ಪ್ರದೇಶದಿಂದ ಆದಷ್ಟು ಬೇಗ ದೂರ ತೆರಳಲು ಬಸ್ಸನ್ನು ವೇಗವಾಗಿ ಚಲಾಯಿಸುತ್ತಿದ್ದೆ. ನಮ್ಮ ಮುಂದೆ ಮಹಾರಾಷ್ಟ್ರ ಬಸ್ ಲಾತೂರಿಗೆ ಹೊರಟಿತ್ತು. ಇದನ್ನು ತಡೆದ ಗುಂಪು ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಿತು. ನಂತರ ನಮ್ಮ ಬಸ್ಸಿಗೂ ಹಾಗೆ ಮಾಡಿತು. ಬಸ್ಸಿನಿಂದ ಕೆಳಗಿಳಿಯದಿದ್ದರೆ ಬಸ್ ಸಮೇತ ನಿಮ್ಮನ್ನೂ ಸುಟ್ಟು ಬಿಡುತ್ತೇವೆ” ಎಂದು ಅವರೆಲ್ಲ ಬೆದರಿಕೆ ಹಾಕಿದ್ದರು ಎಂದು ತಿಳಿಸಿದರು.
ರಾಜ್ಯದ ಬಸ್ಸಿನಲ್ಲಿ ಪ್ರಯಾಣಿಸಿ ರಾಜ್ಯಕ್ಕೆ ಬರುತ್ತಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದು ಅವರನ್ನು ಬೇರೆ ಬಸ್ ಮೂಲಕ ಕರೆದುಕೊಂಡು ಬರಲಾಯಿತು. ಗಲಭೆಗ್ರಸ್ಥ ಪ್ರದೇಶಗಳಾದ ಜಾಲ್ನಾ, ಲಾತೂರ, ಔರಂಗಬಾದ ಪ್ರದೇಶಗಳಿಗೆ ಬಸ್ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಬೆಳಗಾವಿ ವಿಭಾಗದ ನಿಯಂತ್ರಣಾಧಿಕಾರಿ ಶಂಕರ ರಾಠೋಡ ಅವರು ತಿಳಿಸಿದರು.
ಮರಾಠಾ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಮನೋಜ ಜರಂಗೇ ಎಂಬವರು ಜಾಲ್ನ ಸಮೀಪದ ಅಂತರವಾಲಿ ಸರಾಟಿ ಎಂಬಲ್ಲಿ ಕಳೆದ ಆಗಸ್ಟ 28 ರಿಂದ ಅನಿರ್ದಿಷ್ಟ ಅವಧಿಯ ಅನ್ನ ಸತ್ಯಾಗ್ರಹ ಆರಂಭಿಸಿದ್ದು ಶುಕ್ರವಾರ ಅವರ ಆರೋಗ್ಯ ಹದಗೆಟ್ಟಿತ್ತು. ಮುಖ್ಯಮಂತ್ರಿ ಏಕನಾಥ ಶಿಂದೆ ದೂರವಾಣಿ ಕರೆ ಮಾಡಿ ಸತ್ಯಾಗ್ರಹ ಕೈ ಬಿಡುವಂತೆ ವಿನಂತಿಸಿಕೊಂಡಿದ್ದರು. ಆದರೆ ಜರಂಗೆ ಅದಕ್ಕೆ ಸ್ಪಂದಿಸಿರಲಿಲ್ಲ.
ಪೊಲೀಸರು ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಯತ್ನದಲ್ಲಿದ್ದಾಗ ಹೋರಾಟಗಾರರ ಮತ್ತು ಅವರ ನಡುವೆ ಜಟಾಪಟಿ ಉಂಟಾಗಿ ಕಲ್ಲು ತೂರಾಟವಾಗಿದೆ. ಹಿರಿಯ ಅಧಿಕಾರಿಗಳಾದ ರಾಹುಲ್ ಕಾಡೆ ಮತ್ತು ಸಚಿನ ಸಾಂಗಳೆ ಸೇರಿದಂತೆ ಸುಮಾರು 20-ಪೊಲೀಸರು ಗಾಯಗೊಂಡದರಿಂದ ಪೊಲೀಸರು ಮಾಡಿದ ಲಾಠಿ ಪ್ರಹಾರದಲ್ಲಿ ಸುಮಾರು 30 ಹೋರಾಟಗಾರರು ಗಾಯಗೊಂಡಿದ್ದಾರೆ.
ಹೋರಾಟಗಾರರು ಕರ್ನಾಟಕದ ಬಸ್ ಮತ್ತು ಮಹಾರಾಷ್ಟ್ರದ ಐದು ಬಸ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಮೀಸಲಾತಿಗೆ ಆಗ್ರಹಿಸಿ ಶನಿವಾರ ಬಿಡ್ ಜಿಲ್ಲೆ ಬಂದ್ ಗೆ ಕರೆ ನೀಡಲಾಗಿದೆ.