ಬೆಳಗಾವಿ, ಅ. ೮ (ಸಮದರ್ಶಿ ಸುದ್ದಿ): ಸಿಹಿಗೆಣಸು ಬೆಳೆಗೆ ನೀರು ಹಾಯಿಸಲು ಜಮೀನಿಗೆ ತೆರಳಿದ್ದ ಬೆಳಗುಂದಿ ಗ್ರಾಮದ ರೈತರೊಬ್ಬರು ಜೇನುನೊಣಗಳ ಹಿಂಡು ನಡೆಸಿದ ದಾಳಿಗೆ ಬಲಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಸೋನೋಳಿ ಗ್ರಾಮದ ಸಮೀಪ ಬುಧವಾರ ಬೆಳಗ್ಗೆ ನಡೆದಿದೆ.
ಬೆಳಗುಂದಿ ಗ್ರಾಮದ ಅಜಿತ ವಾಸುದೇವ ಪಾಟೀಲ ಅಲಿಯಾಸ್ ಗಾವ್ಡಾ (೬೧) ಮೃತಪಟ್ಟ ರೈತ. ಅಕ್ಟೋಬರ್ ೭ರಂದು ಬುಧವಾರ ಬೆಳಗ್ಗೆ ಸುಮಾರು ೯ ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.
ಸೋನೋಳಿ ಗ್ರಾಮದ ಶರದ ಪಾಟೀಲ ಅವರಿಗೆ ಸೇರಿದ ಜಮೀನಿನಲ್ಲಿ ಅಜಿತ ಸಿಹಿಗೆಣಸು ಬೆಳೆದಿದ್ದರು. ಬುಧವಾರ ಬೆಳಗ್ಗೆ ಬೆಳೆಗೆ ನೀರು ಹಾಯಿಸಲು ತೆರಳಿದ್ದ ಸಂದರ್ಭದಲ್ಲಿ ಜೇನುನೊಣಗಳ ಹಿಂಡು ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ. ಮುಖ ಸೇರಿದಂತೆ ದೇಹದಾದ್ಯಂತ ಜೇನುನೊಣಗಳು ಕಚ್ಚಿದ್ದರಿಂದ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು.
ತಕ್ಷಣ ಅವರನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಎನ್.ಎಸ್. ವಾಳ್ಕಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು.
ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೃತ ರೈತನ ಪುತ್ರ ಗೌತಮ ನೀಡಿದ ದೂರಿನ ಮೇರೆಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇನುನೊಣಗಳ ದಾಳಿಯಿಂದ ರೈತ ಮೃತಪಟ್ಟಿರುವ ಘಟನೆ ಗ್ರಾಮಸ್ಥರಲ್ಲಿ ದುಃಖ ಮೂಡಿಸಿದ್ದು, ಮೃತರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.