ನ್ಯೂಯಾರ್ಕ, ನ. 18: ತೀವ್ರ ನಿರುದ್ಯೋಗ, ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹಾಗೂ ತಪ್ಪು ಆರ್ಥಿಕ ನೀತಿಗಳಿಂದ ಭಾರತ ಆರ್ಥಿಕ ವಿಪತ್ತಿನ ಅಂಚಿಗೆ ತಲುಪಿದೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶ ಗಂಭೀರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಆರ್ಥಿಕ ಬೆಳವಣಿಗೆ ಒಂದು ದಶಕದ ಹಿಂದೆಯೇ ಸ್ಥಗಿತಗೊಂಡಿದೆ. ಕೇಂದ್ರ ಸರಕಾರದ ‘ಮೇಕ್ ಇನ್ ಇಂಡಿಯಾ’ ಹಾಗೂ ‘ಸ್ಟಾರ್ಟ್ಅಪ್ ಇಂಡಿಯಾ’ ಯೋಜನೆಗಳು ವಿಫಲವಾಗಿವೆ ಎಂದು ಟೀಕಿಸಿದರು.
ದೇಶದಲ್ಲಿ ಖಾಸಗಿ ಹೂಡಿಕೆ ಕುಸಿದಿದ್ದು, ಸಣ್ಣ ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ. ಆದರೆ ಗೌತಮ್ ಅದಾನಿ ಹಾಗೂ ಮುಖೇಶ ಅಂಬಾನಿ ಅವರಂತಹ ಕೆಲವೇ ದೊಡ್ಡ ಉದ್ಯಮಿಗಳು ಬೆಳೆಯುತ್ತಿದ್ದಾರೆ. ಟಾಟಾ ಸಂಸ್ಥೆಯನ್ನು ಅದಾನಿ ಏಕೆ ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಚುನಾವಣಾ ಅಕ್ರಮಗಳಿಂದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ. ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರನ್ನು ಪದಚ್ಯುತಗೊಳಿಸುವುದು ಅಗತ್ಯ ಕ್ರಮಗಳಲ್ಲಿ ಒಂದಾಗಿದೆ ಎಂದು ರಾಹುಲ್ ಪ್ರತಿಪಾದಿಸಿದರು.