ತೆಹ್ರಾನ್, ನ. 18: ಹೊರ್ಮುಝ್ ಜಲಸಂಧಿಯ ಕೇಶ್ಮ್ ದ್ವೀಪದ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಕುವೈತ್ನಲ್ಲಿರುವ ಅಮೆರಿಕದ ಡ್ರೋನ್ ಹಾಗೂ ಕ್ಷಿಪಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ರಾತ್ರೋರಾತ್ರಿ ವೈಮಾನಿಕ ದಾಳಿ ನಡೆಸಿರುವುದಾಗಿ ಇರಾನ್ ಘೋಷಿಸಿದೆ.
ಸೆಪ್ಟೆಂಬರ್ ಬಳಿಕ ಅಮೆರಿಕದ ಮಿತ್ರರಾಷ್ಟ್ರ ಕುವೈತ್ ಮೇಲೆ ಇರಾನ್ ನಡೆಸಿದ ಮೊದಲ ದಾಳಿ ಇದಾಗಿದೆ. ಕುವೈತ್ನ ಅಲೀ ಅಲ್ ಸಲೇಂ ವಾಯುನೆಲೆಯಲ್ಲಿರುವ ಅಮೆರಿಕದ ಡ್ರೋನ್ ಹಾಗೂ ಕ್ಷಿಪಣಿ ಸ್ಥಾವರಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ಸೇನೆ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇರಾನ್ನ ಡ್ರೋನ್ ದಾಳಿಗಳನ್ನು ತನ್ನ ವಾಯು ರಕ್ಷಣಾ ಪಡೆಗಳು ಎದುರಿಸುತ್ತಿವೆ ಎಂದು ಕುವೈತ್ ತಿಳಿಸಿದೆ. ದೇಶದ ಸಾರ್ವಭೌಮತ್ವ ಹಾಗೂ ಪ್ರಮುಖ ಸೌಲಭ್ಯಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಹಕ್ಕು ಹೊಂದಿರುವುದಾಗಿ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ, ವಾರದಲ್ಲಿ ಮೂರನೇ ಬಾರಿಗೆ ಇರಾನ್ನ ವೈಮಾನಿಕ ದಾಳಿಯನ್ನು ತಡೆದಿರುವುದಾಗಿ ಬಹ್ರೇನ್ ಹೇಳಿದೆ. ಅಮೆರಿಕ ನೌಕಾಪಡೆಯ ಐದನೇ ನೌಕಾಪಡೆಯ ಪ್ರಧಾನ ಕಚೇರಿ ಹೊಂದಿರುವ ತನ್ನ ವಿರುದ್ಧ ಇರಾನ್ ವ್ಯವಸ್ಥಿತ ಹಗೆತನ ಅನುಸರಿಸುತ್ತಿದೆ ಎಂದು ಆರೋಪಿಸಿದೆ.
ಅಮೆರಿಕದ ಸಿಬ್ಬಂದಿ ಹಾಗೂ ಸೇನಾ ಆಸ್ತಿಗಳ ಮೇಲಿನ ಇರಾನ್ ದಾಳಿಗೆ ಪ್ರತೀಕಾರವಾಗಿ ಅಮೆರಿಕದ ಯುದ್ಧವಿಮಾನಗಳು ಕೇಶ್ಮ್ ದ್ವೀಪದ ಕ್ಷಿಪಣಿ ಉಡಾವಣಾ ನೆಲೆಯನ್ನು ಗುರಿಯಾಗಿಸಿಕೊಂಡಿದ್ದವು ಎಂದು ಅಮೆರಿಕದ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ದಾಳಿಯಿಂದ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಸೇನೆಯ ಎಚ್ಚರಿಕೆ: ಅಮೆರಿಕ ಮತ್ತೊಮ್ಮೆ ದಾಳಿ ನಡೆಸಿದರೆ ಭೌಗೋಳಿಕ ಮಿತಿಗಳನ್ನು ಲೆಕ್ಕಿಸದೆ ಅಮೆರಿಕ ಹಾಗೂ ಅದರ ಬೆಂಬಲಿಗರ ವಿರುದ್ಧ ಇನ್ನಷ್ಟು ಪ್ರಬಲ ಪ್ರತಿದಾಳಿ ನಡೆಸಲಾಗುವುದು ಎಂದು ಇರಾನ್ ಸೇನೆಯ ಮಹಾದಂಡನಾಯಕ ಅಮೀರ್ ಹತಾಮಿ ಎಚ್ಚರಿಸಿದ್ದಾರೆ.
ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಸಂಘರ್ಷದಿಂದ ಹೊರ್ಮುಝ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅಡ್ಡಿಯಾಗಿದ್ದು, ಜಾಗತಿಕ ಇಂಧನ ಬೆಲೆಗಳ ಏರಿಕೆಗೂ ಕಾರಣವಾಗಿದೆ. ಇತ್ತೀಚಿನ ದಾಳಿಗಳು ಬಿಕ್ಕಟ್ಟು ಶಮನಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳಿಗೆ ಮತ್ತಷ್ಟು ಹಿನ್ನಡೆ ಉಂಟುಮಾಡಿವೆ.