ಲಾತೂರ, ೩೧ : ಮಹಾರಾಷ್ಟ್ರದಲ್ಲಿ ಮರಾಠಾ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ನಡೆದಿರುವ ಹೋರಾಟ ಹಿಂಸಾರೂಪ ತಾಳಿದ್ದು ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಸೇರಿದ್ದ ಬಸ್ ಗೆ ಬೆಂಕಿ ಹಚ್ಚಲಾಗಿದೆ.
ಮಹಾರಾಷ್ಟ್ರದ ಲಾತೂರ ಜಿಲ್ಲೆಯಲ್ಲಿ ಸೋಮವಾರ ಸಂಜೆ ಬೆಂಕಿ ಹಚ್ಚಲಾಗಿದೆ. ಮರಾಠಾ ಮೀಸಲಾತಿ ಹೋರಾಟಗಾರರು 44-ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್ಸನ್ನು ಜಿಲ್ಲೆಯ ಉಮರ್ಗಾ ದಲ್ಲಿ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಕಲ್ಲೆಸದು ನಂತರ ಬೆಂಕಿ ಹಚ್ಚಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ವಿಭಾಗಕ್ಕೆ ಸೇರಿದ್ದ ಬಸ್ ಸೋಮವಾರ ಸಂಜೆ ಭಾಲ್ಕಿಯಿಂದ ಪ್ರಯಾಣ ಆರಂಭಿಸಿತ್ತು. ಪುಣೆಗೆ ತೆರಳಿದ್ದ ಬಸ್ಸನ್ನು ತಡೆದ ಹೋರಾಟಗಾರರು ಮರಾಠರಿಗೆ ಶಿಕ್ಷಣ ಮತ್ತು ಸರಕಾರಿ ನೌಕರಿಯಲ್ಲಿ ಮೀಸಲಾತಿ ನೀಡಲೇ ಬೇಕೆಂದು ಘೋಷಣೆ ಕೂಗುತ್ತ ಬಸ್ಸಿಗೆ ಬೆಂಕಿಯಿತ್ತರು. ಹೋರಾಟಗಾರರು ಚದುರಿದ ನಂತರ ಬಸ್ ಚಾಲಕ ಮತ್ತು ನಿರ್ವಾಹಕರು ಮಹಾರಾಷ್ಟ್ರ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರನ್ನು ಕಳುಹಿಸುವ ಏರ್ಪಾಡು ಮಾಡಿದರು.
ಈ ಘಟನೆಯ ನಂತರ ಮಹಾರಾಷ್ಟ್ರದಲ್ಲಿರುವ ವಿಭಾಗದ ಎಲ್ಲ ಬಸ್ ಗಳನ್ನು ಕೂಡಲೇ ಹತ್ತಿರದ ಬಸ್ ಡಿಪೋ ಅಥವಾ ಸಮೀಪದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲು ಸೂಚಿಸಲಾಯಿತು ಹಾಗೂ ರಾಜ್ಯ ಈಶಾನ್ಯ ವಿಭಾಗದಿಂದ ಮಹಾರಾಷ್ಟ್ರಕ್ಕೆ ತೆರಳುವ ಎಲ್ಲ ಬಸ್ ಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಯಿತು
ಕಲ್ಯಾಣ ಕರ್ನಾಟಕ ರಾಜ್ಯ ಸಾರಿಗೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಚಪ್ಪ ಘಟನೆಯ ಮಾಹಿತಿ ನೀಡಿ ಪರಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಆ ರಾಜ್ಯಕ್ಕೆ ತಾತ್ಕಾಲಿಕವಾಗಿ ಸೇವೆ ನಿಲ್ಲಿಸಲಾಗಿದೆ. ಪ್ರಯಾಣಿಕರ, ಬಸ್ ಸಿಬ್ಬಂದಿ ಮತ್ತು ಬಸ್ ಗೆ ಆಗುವ ಹಾನಿ ತಪ್ಪಿಸಲು ಈ ನಿರ್ಧಾರ ಕೈಕೊಳ್ಳಲಾಗಿದೆ ಎಂದು ತಿಳಿಸಿದರು.
ಘಟನೆಯ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲೆಯ ವಿಭಾಗದಲ್ಲಿ ಬರುವ ಎಲ್ಲ ಉಪ ವಿಭಾಗದಿಂದ ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ, ಮಿರಜ್ ಜಿಲ್ಲೆಗಳಿಗೆ ಸಂಚಾರಿಸುವ ಎಲ್ಲ 124 ಬಸ್ ಸಂಚಾರ ರದ್ದು ಮಾಡಲಾಗಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಸಂಚಾರದಲ್ಲಿರುವ 42 ಬಸ್ ಗಳನ್ನು ಹತ್ತಿರದ ಡಿಪೋ ಅಥವಾ ಸಮೀಪದ ಪೊಲೀಸ್ ಠಾಣೆಗಳಿಗೆ ತೆಗೆದುಕೊಂಡು ಹೋಗಲು ಸೂಚಿಸಲಾಗಿದೆ ಎಂದು ವಿಜಯಪುರ ಉಪ ವಿಭಾಗಾಧಿಕಾರಿ ಮೊಹಮ್ಮದ ಫಯಾಜ ತಿಳಿಸಿದ್ದಾರೆ.
ಮುಂಬೈ, ಪುಣೆ, ಲಾತೂರ, ಉಸ್ಮಾನಾಬಾದ, ನಾಂದೇಡ ಮುಂತಾದ ದೂರದ ಸ್ಥಳಗಳಿಗೆ ತೆರಳುವ ಬಸ್ ಸಂಚಾರವನ್ನೂ ನಿಲ್ಲಿಸಲಾಗಿದೆ. ಆನ್ ಲೈನ್ ಮೂಲಕ ಮುಂಗಡ ಟಿಕೆಟ್ ಬುಕಿಂಗ್ ಗುರುವಾರದವರೆಗೂ ರದ್ದು ಮಾಡಲಾಗಿದೆ. ಗುರುವಾರದ ವರೆಗೆ ಮುಂಗಡ ಸ್ಥಳ ಕಾಯ್ದೆರಿಸಿರುವವರಿಗೆ ಹಣ ಹಿಂದಿರುಗಿಸಲಾಗುತ್ತಿದೆ ಎಂದು ಫಯಾಜ ತಿಳಿಸಿದರು.