ಬೆಳಗಾವಿ : ಸಿಡಿ ಬಹಿರಂಗಗೊಂಡ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ, ಆಪರೇಷನ್ ಕಮಲದ ರೂವಾರಿ ರಮೇಶ ಜಾರಕಿಹೊಳಿ ಜೆಡಿಎಸ್ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.
ಅವರೊಂದಿಗೆ ಹತ್ತಿರದ ಒಡನಾಟ ಹೊಂದಿರುವವರ ಪ್ರಕಾರ, ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯ ಬಿಜೆಪಿ ಮುಖಂಡರು ಅವರೊಂದಿಗೆ ಅಂತರ ಕಾಯ್ದುಕೊಂಡಿದ್ದಲ್ಲದೇ ಯಾವುದೇ ಪ್ರಮುಖ ವಿಷಯಗಳಿಗೂ ಅವರನ್ನು ಅಹ್ವಾನಿಸುತ್ತಿಲ್ಲ, ಜೊತೆಗೆ ಸಚಿವ ಸಂಪುಟಕ್ಕೂ ಪುನಃ ಸೇರಿಸಿಕೊಂಡಿಲ್ಲ. ಅಲ್ಲದೇ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿ ಸರಕಾರದಲ್ಲಿ ಪಾಲುದಾರರಾದ ಶಾಸಕರೂ ಕೂಡ ರಮೇಶ ಜಾರಕಿಹೊಳಿಯೊಂದಿಗೆ ಅಷ್ಟಕಷ್ಟೆ ಇದುದ್ದರಿಂದ ಅವರು ಜೆಡಿಎಸ್ ಸೇರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ರಮೇಶ ಸಹೋದರ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಕುಮಾರಸ್ವಾಮಿಯವರನ್ನು ಎರಡು ಬಾರಿ ಭೇಟಿಯಾಗಿ ಮಾತನಾಡಿದ್ದು, ರಮೇಶ ಮುಂದಿನ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಉತ್ತರ ಕರ್ನಾಟಕ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ನೆಲೆ ಕಾಣದಿರುವ ಜೆಡಿಎಸ್ ಪಕ್ಷವು ರಮೇಶ ಜಾರಕಿಹೊಳಿ ಸೇರ್ಪಡೆಗೆ ಒಪ್ಪಿಗೆ ಕೊಡುವ ಸಾಧ್ಯತೆಯಿದ್ದು, ಅವರ ಮೂಲಕ ಉತ್ತರ ಕರ್ನಾಟಕದಲ್ಲಿ ಪುನಃ ಪಾದಾರ್ಪಣೆ ಮಾಡುವ ಚಿಂತನೆಯಲ್ಲಿದೆ.
ಈ ಮೊದಲು ಬಾಲಚಂದ್ರ ಜಾರಕಿಹೊಳಿ ಮತ್ತು ಹುಕ್ಕೇರಿ ಶಾಸಕ ದಿ. ಉಮೇಶ ಕತ್ತಿ ಅವರು ಜನತಾ ದಳದ ಶಾಸಕರಾಗಿದ್ದು ಬಳ್ಳಾರಿಯ ರೆಡ್ಡಿ ಸಹೋದರರ ನೇತೃತ್ವದಲ್ಲಿ ನಡೆದ ಮೊದಲ ಆಪರೇಷನ್ ಕಮಲದಲ್ಲಿ ಜೆಡಿಎಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಯಡಿಯೂರಪ್ಪ ಸರಕಾರದಲ್ಲಿ ಸಚಿವರಾಗಿದ್ದರು. ಆದರೂ ಕುಮಾರಸ್ವಾಮಿಯವರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡಿದ್ದರು.
ಇನ್ನು ರಮೇಶ ಜಾರಕಿಹೊಳಿ ಅವರ ಸೇರ್ಪಡೆಯಿಂದ ಉತ್ತರ ಕರ್ನಾಟಕದಲ್ಲಿ ಸುಮಾರು 6 ರಿಂದ 8 ಸ್ಥಾನ ಗೆಲ್ಲಬಹುದೆಂದು ಅಂದಾಜಿಸಿರುವ ಕುಮಾರಸ್ವಾಮಿ ಅವರು, ಅದೇ ಕಾರಣಕ್ಕೆ ಜೆಡಿಎಸ್ ಬಿಟ್ಟು ಮುಂದಿನ ಸರಕಾರ ಸಾಧ್ಯವಿಲ್ಲವೆಂದು ಅನೇಕ ಬಾರಿ ಹೇಳಿದ್ದಾರೆ. ಉತ್ತರ ಕರ್ನಾಟಕದಲ್ಲಿ 8 ದಕ್ಷಿಣ ಕರ್ನಾಟಕದಲ್ಲಿ 30 ಸೇರಿದರೆ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಅಂದಾಜಿಸಲಾಗಿದೆ.
ರಮೇಶ ಜಾರಕಿಹೊಳಿ ಬಿಜೆಪಿ ತೊರೆದು ಜೆಡಿಎಸ್ ಸೇರುವದು ನಿಜವಾದರೆ ಜಿಲ್ಲೆಯಲ್ಲಿ ಅವರ ಬೆಂಬಲಿಗರಾದ ಅಥಣಿ ಶಾಸಕ ಮಹೇಶ ಕುಮಟಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕೂಡ ಜೆಡಿಎಸ್ ಸೇರುವ ಸಾಧ್ಯತೆಯಿದೆ.